ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ವಿಚಾರ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಚಿಕ್ಕಮಗಳೂರು ಜಿಲ್ಲೆಯ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಜನಾಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಕಾಡಾನೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಬೇಲೂರು ಭಾಗದಿಂದ ಮೂಡಿಗೆರೆ ಕಡೆಗೆ ಕಾಡಾನೆಗಳನ್ನು ಓಡಿಸುವ ಕ್ರಮದಿಂದ ಗೋಣಿಬೀಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಕಾಫಿ ತೋಟಗಳಿಗೆ ಆನೆಗಳು ನುಗ್ಗುವ ಭೀತಿ ಹಾಗೂ ಬೆಳೆ ಹಾನಿಯ ಆತಂಕದಿಂದ ರೈತರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾಸಕರ ರಾಜೀನಾಮೆ ಎಚ್ಚರಿಕೆ
ಈ ವಿಚಾರ ಆಡಳಿತಾರೂಢ ಕಾಂಗ್ರೆಸ್ನಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ,ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ರಾಜೀನಾಮೆ ಘೋಷಿಸಿದ್ದು, ಈ ಪೈಕಿ ನಯನಾ ಮೋಟಮ್ಮ ಸ್ಪೀಕರ್ ಅವರ ಆಪ್ತ ಸಹಾಯಕರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ನಾಳೆ ಸ್ಪೀಕರ್ ಬಂದ ಮೇಲೆ ಅವರಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನಲೆ ಆನೆ ಸ್ಥಳಾಂತರ ಮುಂದುವರಿಸಬೇಕೋ ಅಥವಾ ಬೇಡವೋ ಎಂಬುದನ್ನು ಬಿಕ್ಕಟ್ಟಿಗೆ ಅರಣ್ಯಧಿಕಾರಗಳು ಬಿದ್ದಿದ್ದು, ಕಡೆಗೆ ಕಾರ್ಯಚರಣೆ ನಿಲ್ಲಿಸಲಾಗಿದೆ.
ಇಂದಿನ ಬೆಳವಣಿಗೆ ಏನು?
ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸ್ಥಳಾಂತರ ವಿರೋಧಿ ಪ್ರತಿಭಟನೆಗಳು ಮುಂದುವರಿದಿವೆ. ಮೂಡಿಗೆರೆಯಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ರಸ್ತೆ ತಡೆ ನಡೆಸಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ತರೀಕೆರೆ ಭಾಗದಲ್ಲಿಯೂ ಕಾಡಾನೆಗಳ ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಗಿದೆ.
ಸುಮಾರು 54 ಕಾಡಾನೆಗಳನ್ನು ಸ್ಥಳಾಂತರಿಸುವ ಯೋಜನೆಯ ಭಾಗವಾಗಿ ನಡೆದ ಕಾರ್ಯಾಚರಣೆಯಲ್ಲಿ 38 ಆನೆಗಳು ಮಕೋನಹಳ್ಳಿ ಭಾಗದತ್ತ ಸಾಗಿವೆ ಎಂದು ವರದಿಯಾಗಿದೆ. ಸದ್ಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಆನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದೆ.
ಇದೀಗ ಕಾಡಾನೆಗಳ ಸ್ಥಳಾಂತರ ವಿಚಾರಕ್ಕೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ? ಶಾಸಕರ ಅಸಮಾಧಾನ ಶಮನವಾಗುತ್ತದೆಯೇ? ಎಂಬ ಪ್ರಶ್ನೆಗಳು ಮೂಡಿವೆ.



















