SK Home Ad
Home ಅಂಕಣ ಅಂಕಣ ಬರಹ | ಕಲ್ಯಾಣ-ಕರಾವಳಿ ಬದುಕಿಗೆ ಬೇಕಿಲ್ಲ ಭಾವನೆಯ ಆಟ!

ಅಂಕಣ ಬರಹ | ಕಲ್ಯಾಣ-ಕರಾವಳಿ ಬದುಕಿಗೆ ಬೇಕಿಲ್ಲ ಭಾವನೆಯ ಆಟ!

0
1

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಸಾಕಿಗ ಕಲ್ಯಾಣ ಮತ್ತು ಕರಾವಳಿ ಕರ್ನಾಟಕ ಭಾಗದ ಜನರ ಬದುಕು ಬವಣೆ, ಭಾವನೆಗಳದ್ದೇ ಜಿಜ್ಞಾಸೆಯ ಕಾಲ.
ಮುಖ್ಯಮಂತ್ರಿಯಾಗಿ ಒಂದು ನೂರು ದಿನಗಳನ್ನು ಪೂರೈಸಿದ ಡಿ.ಕೆ. ಶಿವಕುಮಾರ್ ನಾವು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ; ಜನರ ಬದುಕಿನ ಹಿತಕ್ಕಾಗಿ ಆಡಳಿತ ನೀಡುತ್ತೇವೆ' ಎಂದು ಕಲಬುರ್ಗಿಯಿಂದ ಮಂಗಳೂರುವರೆಗೆ ರಾಜ್ಯ ಸರ್ಕಾರದಫೇರಿ’ ನಡೆಸಿದರು!

ಕಲ್ಯಾಣ ಕರ್ನಾಟಕದ ಉದಯ 79ನೇ ಹೈದರಾಬಾದ್ ವಿಮೋಚನಾ ದಿನ ಅಂಗವಾಗಿ ಕಲಬುರ್ಗಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸುಮಾರು ಒಂಬೈನೂರರಷ್ಟು ಹೊಸ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಹಾಗೇ ಸುಮಾರು 6700 ಕೋಟಿಗೂ ಅಧಿಕ ಹೊಸ ಯೋಜನೆಗಳನ್ನು ಘೋಷಿಸಿದರು. ಹೈದರಾಬಾದ್ ಕರ್ನಾಟಕ ಈಗ ಕಲ್ಯಾಣ ಕರ್ನಾಟಕ ಎಂದು ಪುನರ್ನಾಮಕರಣವಾಗಿರುವುದು, ಈ ನಾಡಿನ ಇತಿಹಾಸ, ಜನರ ಭಾವನೆ, ಸಾಮಂತರ ಮತ್ತು ಹೈದರಾಬಾದ್ ನಿಜಾಮರಿಂದ ವಿಮೋಚನೆ ಇವೆಲ್ಲ ಇತಿಹಾಸಗಳನ್ನು ಸ್ಮರಿಸುತ್ತ 371 (ಜೆ) ಅದರ ಲಾಭ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇತ್ಯಾದಿ ಸರ್ಕಾರದ ಸಾಧನೆಗಳನ್ನು ಬಣ್ಣಿಸುತ್ತಲೇ, ತಮ್ಮ ನಾಯಕರ ಹೋರಾಟಗಳನ್ನು ಪ್ರತಿಧ್ವನಿಸಲು ಮರೆಯಲಿಲ್ಲ. ಈಗ 6700 ಕೋಟಿ ರೂಪಾಯಿಗಳ ಯೋಜನೆ ಜೊತೆಗೆ ಈ ಭಾಗದ ಹಲವು ತೊಡಕುಗಳನ್ನು ಬಿಚ್ಚುವ ಭರವಸೆ ನೀಡಿದರು. ಯುವ ಜನರ ಬದುಕು ಬವಣೆಗೆ ಪರಿಹಾರ ದೊರೆತಾಗ ಮಾತ್ರ ಜನ ನೆಮ್ಮದಿ ಕಂಡಾರು ಎಂಬ ಭಾವನೆಯನ್ನೂ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಕಲಬುರ್ಗಿಗೆ ಹೋಗಿ ಮರಳಿದ ದಿನವೇ ಸುಮಾರು ಹದಿನಾಲ್ಕು ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿ ಗೊಂದಲಗಳಿಂದಾಗಿ ನ್ಯಾಯಾಲಯ `ಹೊಸ ಪರೀಕ್ಷೆ’ ನಡೆಸುವಂತೆ ನಿರ್ದೇಶಿಸಿದೆ.!

ಈ ಮಧ್ಯೆ ನೇಮಕಾತಿಯ ಗೊಂದಲ 371 (ಜೆ) ಮೀಸಲಾತಿಯ ವಿವಾದ, ಅಭಿವೃದ್ಧಿ ಮಂಡಳಿಯಲ್ಲಿನ ರಾಜಕೀಯ, ಸ್ಥಳೀಯ ರಾಜಕಾರಣಿಗಳ ಬಗೆಗಿನ ಜಿಗುಪ್ಸೆ, ನಿರ್ಲಕ್ಷ್ಯತನ ಎಲ್ಲವೂ ಕೂಡ ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ತೊಡಕಾದದ್ದೇ! 371 (ಜೆ) ಕೊಡಲು ಉಪ ಪ್ರಧಾನಿಯಾಗಿದ್ದ ಎಲ್.ಕೆ. ಅಡ್ವಾಣಿಯವರು ನಿರಾಕರಿಸಿದ್ದರು. ಆ ನಂತರ 2012ರಲ್ಲಿ ಮಲ್ಲಿಕಾರ್ಜುನ ಖರ್ಗೆ ಯತ್ನದಿಂದ ಈ ಹಕ್ಕು ದಯಪಾಲಿಸಿದಾಗ ಇನ್ನೇನು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಅಭ್ಯುದಯವಾದೀತೆಂದು ಅಂದುಕೊಂಡಿದ್ದರು ಇಡೀ ನಾಡಿನ ಜನ. ಆದರೆ ಇಂದಿಗೂ ಅಲ್ಲಿಯ ಶಾಲೆಗಳಿಗೆ ಶಿಕ್ಷಕರಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳಿಲ್ಲ. ರೈತರ ಹೊಲಕ್ಕೆ ನೀರು- ರಸ್ತೆಗಳಿಲ್ಲ. ಈ ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಇಲ್ಲ. ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ಇಲ್ಲ. ಇಡೀ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವ ಈ ಭಾಗದ ಜನರಿಗೆ ರಕ್ತ ನೀಡಿ ಕಣ್ಣೀರು ಒರೆಸುವ ಕಾರ್ಯ ಆಗಿಲ್ಲ !!

ಹಾಗಂತ ಇದೇ ಭಾಗದಿಂದ ವೀರೇಂದ್ರ ಪಾಟೀಲ ಎರಡು ಸಾರೆ ಮುಖ್ಯಮಂತ್ರಿಯಾದರೆ, ಧರ್ಮಸಿಂಗ್ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿದ್ದವರು. ಎಲ್ಲ ಸರ್ಕಾರಗಳಲ್ಲಿ ಈ ಭಾಗದ ಪ್ರಮುಖರು ಮಂತ್ರಿಗಳು, ಕೇಂದ್ರ ಮಂತ್ರಿಗಳೆಲ್ಲ ಆಗಿದ್ದಾರೆ.

ಆದರೇನು? ಕಲ್ಯಾಣ ನಾಡಿನ ಶಾಸಕರು, ಮಂತ್ರಿಗಳು, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಕ್ಷೇತ್ರಕ್ಕೆ `ವಿಸಿಟಿಂಗ್’ ಪ್ರತಿನಿಧಿಗಳಂತೆ ತೋರುತ್ತಿರುವುದೇ ಇಂದಿನ ದುಸ್ಥಿತಿಗೆ ಕಾರಣ ಎನ್ನುವ ವಾಸ್ತವ ಎಲ್ಲರಿಗೂ ಅರಿವಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾನು ಭಾವನೆಯೊಂದಿಗೆ ರಾಜಕಾರಣ ಮಾಡುವುದಿಲ್ಲ; ಬದುಕಿನೊಂದಿಗೆ ರಾಜ್ಯ ಕಟ್ಟುತ್ತೇನೆ' ಎಂದಿದ್ದಾರೆ. ಈ ಮಾತಿನಂತೆ ಕಲ್ಯಾಣ ಕರ್ನಾಟಕದ ಜನರ ಭಾವನೆ ಅರ್ಥೈಸಿಕೊಂಡು ಬದುಕಿನ ಬವಣೆ ನಿವಾರಿಸುವ ಸಂಕಲ್ಪ ತೊಡಬೇಕಿದೆ ಸಿಎಂ. ಇವರು ಮತ್ತೊಬ್ಬವಿಸಿಟಿಂಗ್’ ಮುಖ್ಯಮಂತ್ರಿ ಆಗದಿರಲಿ ಎನ್ನುವ ಆಶಯ ಜನರದ್ದು!

ಅಲ್ಲಿಂದ ಡಿಕೆ ಹಾರಿದ್ದು ಮಂಗಳೂರಿಗೆ. ಕರಾವಳಿಯಲ್ಲಿ ವಿಶೇಷ ಸಂಪುಟ ಸಭೆ ನಡೆಸಿ ಸುಮಾರು 16 ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ಘೋಷಿಸಿದರು. ಕರಾವಳಿಯಲ್ಲಿ ಸಂಪುಟ ಸಭೆ ನಡೆಸಿರುವುದಕ್ಕೆ ಯಾರೇನೇ ಆಕ್ಷೇಪ ವ್ಯಕ್ತಪಡಿಸಲಿ. ಅಥವಾ `ಟೂರಿಂಗ್ ಟಾಕೀಸ್’ ಎಂದು ಜರಿಯಲಿ. ಇದು ಅಗತ್ಯವೂ ಮತ್ತು ಜನ ಅಪೇಕ್ಷಿಸಿದ ಕಾರ್ಯಕೂಡ ಆಗಿತ್ತು. ಅದಕ್ಕಾಗಿಯೇ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ಸಂಪುಟ ಸಭೆ ನಡೆಸುವೆ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿಕೊಂಡು ವಿರೋಧಿಗಳಿಗೆ ಉತ್ತರ ನೀಡಿದ್ದಾರೆ.

ಕರಾವಳಿ ಸಂಪುಟ ಸಭೆಯಲ್ಲಿ ತೀರ್ಮಾನವಾಗಿರುವಂತೆ ಜನರ ಭಾವನೆಗಳಿಗೆ ಸ್ಪಂದಿಸಿ, `ತುಳು ಭಾಷೆಗೆ ಎರಡನೇ ರಾಜ್ಯ ಆಡಳಿತ ಭಾಷೆಯ ಸ್ಥಾನಮಾನ’ ನೀಡಲಾಗಿದೆ. ಮೂರು ದಶಕಗಳಿಂದ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಬೇಕು ಹಾಗೂ ರಾಜ್ಯದ ಎರಡನೇ ಭಾಷೆಯಾಗಿ ಮಾನ್ಯತೆ ನೀಡಬೇಕೆಂಬ ಕೂಗಿಗೆ ಈಗ ಸ್ಪಂದನೆ ದೊರೆತಿದೆ.

ತುಳು ದೈವ ಭಾಷೆ. ಭಾವನಾತ್ಮಕವಾಗಿ ಕೊಂಡಿ ಬೆಸೆದ ದ್ರಾವಿಡ ಭಾಷೆಗಳ ಸಹ ಪಂಕ್ತಿಯಲ್ಲಿರುವ, ಸಾಕಷ್ಟು ಐತಿಹಾಸಿಕ ಹೊಂದಿರುವ ನುಡಿ ಇದು ಎಂಬುದು ನಿಜ. ಇದಕ್ಕಾಗಿಯೇ ಡಾ. ಮೋಹನ ಆಳ್ವಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಕೂಡ ರಚನೆಯಾಗಿತ್ತು. ಆದರೆ ಸಮಿತಿ ರಚಿಸಿದವರು ವರದಿ ಪಡೆದು ತಣ್ಣಗಿಟ್ಟಿದ್ದರು! ಕಳೆದ ಪ್ರಣಾಳಿಕೆಯಲ್ಲಿ ತುಳುವಿಗೆ ಎರಡನೇ ಭಾಷೆಯ ಸ್ಥಾನಮಾನ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದಂತೆ ಈಗ ಲಕ್ಷಾಂತರ ತುಳು ಭಾಷಿಕರ ಆಶಯ ಈಡೇರಿಸಿಕೊಟ್ಟಿದೆ.

ಇದು ಸದ್ಯದ ಮಟ್ಟಿಗೆ ಡಿ.ಕೆ. ಶಿವಕುಮಾರ್ ಅವರ ಭಾವನೆ-ಬದುಕಿನ ರಾಜಕಾರಣದ ಒಂದು ಮುಖ. ಬಹುತೇಕ ಮಂಗಳೂರು, ಉಡುಪಿ, ಕಾಸರಗೋಡು, ಸ್ವಲ್ಪ ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಷ್ಟೇ ಕಾಣಸಿಗುವ ತುಳು ಭಾಷಿಕರ ಭಾವನೆಗೆ ಪ್ರಾತಿನಿಧ್ಯ ದೊರೆತಂತಾಗಿದೆ. ಹೊರ ರಾಜ್ಯ, ಹೊರ ದೇಶಗಳಲ್ಲಿರುವ ಈ ಜೆನ್ ಝೀ, ಅಲ್ಫಾಗಳಿಂದ ಹಿಡಿದು ಕೋಟ್ಯಂತರ ತುಳು ಭಾಷಿಕರ ಮನ ಗೆಲ್ಲುವ, ಅವರ ಸಾಂಸ್ಕೃತಿಕ ಸಂಬಂಧಗಳನ್ನು ಅಭಿವೃದ್ಧಿಗೆ ಬೆಸೆಯುವ ಕಾರ್ಯವಂತೂ ನಿಜ. ಇದಕ್ಕೆ ಯಾರ ಆಕ್ಷೇಪವಂತೂ ಇಲ್ಲವೇ ಇಲ್ಲ.

ಹೀಗಾಗಿ ಕರಾವಳಿ ಕೋಟೆ ಯಾತ್ರೆ ಪ್ರತಿಪಕ್ಷಕ್ಕೆ ಖಾರವಾಗಿದ್ದರೆ, ಜನರಲ್ಲಿ ಸಂಚಲನ ಮೂಡಿದೆ. ಹನ್ನೊಂದು ಶಾಸಕರು ಬಿಜೆಪಿಯಿಂದ ಆಯ್ಕೆಯಾದರೂ, ಸಂಸದರಿಬ್ಬರು ದೀರ್ಘ ಕಾಲ ಪ್ರತಿನಿಧಿಸಿದರೂ ತುಳುಗೆ ಅಧಿಕೃತ ಭಾಷೆಯ ಸ್ಥಾನ ಮಾನ ಕೊಡಿಸಲಾಗದ ಕೇಸರಿ ಪಾಳಯಕ್ಕೆ ಈಗ ಕಾಂಗ್ರೆಸ್ ಒಳ್ಳೇ ಏಟು ನೀಡಿದಂತಾಗಿದೆ. ಹಾಗಂತ, ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯಾಗುವ ಎಲ್ಲ ಅಂಶಗಳೂ ಇವೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಇಂತಹ ಎರಡು, ಮೂರು, ನಾಲ್ಕನೇ ರಾಜ್ಯಭಾಷೆಗಳಿವೆ.

ಸಂಪುಟ ಸಭೆ ಕರಾವಳಿ ಕರ್ನಾಟಕದ ಅಭ್ಯುದಯಕ್ಕಾಗಿ 16 ಸಾವಿರ ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಸಿಎಂ ಘೋಷಿಸಿದ್ದಾರೆ. ಬಂದರು ಅಭಿವೃದ್ಧಿ, ರಸ್ತೆ, ನೀರು, ವಿಮಾನ ನಿಲ್ದಾಣ, ಆಸ್ಪತ್ರೆ, ಪ್ರವಾಸೋದ್ಯಮ, ಶಿಕ್ಷಣ, ಹಲವು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಪುಟ ಮಾನ್ಯತೆ ಕೊಟ್ಟಿದೆ. ಆದರೆ ಅವೆಲ್ಲವನ್ನೂ ಸಾಧ್ಯವಾಗಿಸುವ ಹೊಣೆ ಯಾರದ್ದೆಂಬ ಪ್ರಶ್ನೆ ಈಗ ಸಹಜವಾಗಿ ಮೂಡಿದೆ. 370 ಕಿಮೀ ಉದ್ದದ ಕರ್ನಾಟಕ ಕರಾವಳಿಯಲ್ಲಿ ಮಂಗಳೂರು- ಉಡುಪಿಯಷ್ಟೇ ಕರಾವಳಿಯೇ? ಉತ್ತರ ಕನ್ನಡ ನಿರ್ಲಕ್ಷಿಸಲಾಗಿರುವುದು ಏಕೆ? ಎಂಬ ಕೂಗು ಈಗಲೇ ಎದ್ದಿದೆ. ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಲಾಗದ ಸರ್ಕಾರ, ಜನರ ಹೋರಾಟ ನಿಶ್ಯಕ್ತಗೊಳಿಸುತ್ತಲೇ ಬಂದವೆನ್ನಿ..

ಪ್ರವಾಸೋದ್ಯಮ ಬೆಳವಣಿಗೆಗೆ ಅತ್ಯಧಿಕ ಒತ್ತು ಕೊಟ್ಟಿರುವ ಸರ್ಕಾರ, ಮೂಲ ತೊಡಕಾಗಿರುವ ಸಿಆರ್‌ಝಡ್ (ಕರಾವಳಿ ನಿಯಂತ್ರಣ ವಲಯ) ಮತ್ತು ಅರಣ್ಯ ಕಾಯ್ದೆಯ ತೊಡಕಿನ ಬಗ್ಗೆ ಏನನ್ನೂ ಹೇಳಿಲ್ಲ. ಕರಾವಳಿ ಭಾಗದವರಿಗೆ ಅಗತ್ಯವಾಗಿರುವುದು ಏನೆಂದರೆ ಅವರಿಗೆ ನಿಲ್ಲಲು ನೆಲೆ. ಅದು ಹಲವಷ್ಟು ರಾಜ್ಯ- ರಾಷ್ಟ್ರೀಯ ಯೋಜನೆಗಳಿಗೆ, ರಾಷ್ಟçಕ್ಕೆ ಬೆಳಕು-ಶಕ್ತಿ ಒದಗಿಸಿದ ಕರಾವಳಿಯ ಜನರ ಬದುಕಿಗೆ ಈಗ ಅಗತ್ಯ. ತ್ಯಾಗ ಮಾಡಿದ ಈ ಜೀವಗಳಿಗೆ ನಿಶ್ಚಿತತೆ ಇಲ್ಲ.

16 ಸಾವಿರ ಕೋಟಿ ರೂಪಾಯಿ ಯೋಜನೆಗಳನ್ನು ಘೋಷಿಸಿದ ಸಚಿವ ಸಂಪುಟ ಸಭೆ ಈ ಭಾಗದಲ್ಲಿ ಪರಂಪರಾಗತವಾಗಿ ನೆಲೆನಿಂತ ಕೃಷಿಕರಿಗೆ ಬದುಕಿನ ಹಕ್ಕು ಕೊಡುವ ನಿರ್ಧಾರ ಕೈಗೊಳ್ಳಬೇಕಿತ್ತು. ಈಗ ನೋಡಿ. ನೂರಾರು ವರ್ಷಗಳ ಕಾಲ ಭೂಮಿ ಸಾಗುವಳಿ ಮಾಡಿಕೊಂಡ ಕೃಷಿಕರಿಗೆ, ಅರಣ್ಯದಂಚಿನ ಜನರಿಗೆ ಭೂಮಿ ಇಲ್ಲ. ಯೋಜನೆಗಳಿಗೆ ಸಂತ್ರಸ್ತರಾದ ಸಹಸ್ರಾರು ಮಂದಿಗೆ ಭದ್ರ ನೆಲೆ ಇಲ್ಲ. 1950-60ರ ವರ್ಷಗಳಲ್ಲಿ ನೆಲೆ ಕಳೆದುಕೊಂಡ ಶರಾವತಿ ಸಂತ್ರಸ್ತರ ಬದುಕು-ಪರಿಹಾರ ಬೀದಿ ಪಾಲಾಗಿವೆ. ಆ ನಂತರದ ಮಂಗಳೂರು ಬಂದರು ಯೋಜನೆ, ಎಂಆರ್‌ಪಿಎಲ್, ಶರಾವತಿ ಟೇಲರೀಸ್, ಕೈಗಾ, ಕೊಡಸಳ್ಳಿ, ಸೀಬರ್ಡ್ ಮುಂತಾದ ಯೋಜನೆಗಳ ಸಂತ್ರಸ್ತರ ಬದುಕಿಗೊಂದು ಶಾಶ್ವತ ನೆಲೆ, ಪರಿಹಾರ ಘೋಷಿಸಿಬೇಕಿತ್ತು.

ದುರಂತ ಎಂದರೆ ಈಗ ಎರಡು ದಿನ ವಿಶೇಷ ಅಧಿವೇಶನದಲ್ಲಿ ನಡೆದ `ಕಸ್ತೂರಿ ರಂಗನ್’ ವರದಿ ತೂಗುಗತ್ತಿ ಚರ್ಚೆ ಇದೇ ಜನರಿಗಾಗಿ. ಇಲ್ಲಿನ ಜನರೊಟ್ಟಿಗಿದ್ದೇವೆ ಎಂದು ವಿಧಾನ ಮಂಡಲದಲ್ಲಿ ನಿರ್ಣಯಿಸಿ ಘೋಷಿಸಿಕೊಂಡರೂ ಜನ ಖುಷಿಗೊಂಡಿಲ್ಲ. ಏಕೆಂದರೆ ಇದೊಂದು ಕಾಲ ದೂಡುವ ಪ್ರಯತ್ನವಷ್ಟೇ ಎಂಬುದು ಜನರಿಗೆ ಗೊತ್ತು. ಈ ಭಾವನೆಗಳ ಮೇಲೆ ಮುಖ್ಯಮಂತ್ರಿ ರಾಜಕಾರಣ ಮಾಡದಿದ್ದರೂ ಜನರ ಕಾಲ ಸೆಳೆಯುವ ಕಾರ್ಯವೆಸಗಿದ್ದೆಂಬುದರ ಅರಿವೂ ಇದೆ.

ಇತ್ತ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ಆರಂಭವಾಗಿದ್ದರೆ, ಅತ್ತ ಕರಾವಳಿ-ಮಲೆನಾಡು ಭಾಗದ ಮಾಲ್ಕಿ ಬೆಟ್ಟ, ಕಾಡಂಚಿನ ಮನೆಗಳಿಗೆ (ಸರ್ಕಾರವೇ ನೀಡಿರುವುದು) ತೆರಿಗೆ ಕಟ್ಟಿಸಿಕೊಳ್ಳದಂತೆ, ನಂಬರ್ ಕೊಡದಂತೆ, ಮಾಲಿಕ ಸತ್ತರೆ ಮಕ್ಕಳ ಹೆಸರಿಗೆ ಮನೆ ಮಂಜೂರು ಮಾಡದಂತೆ, ಭೂಮಿ ನೀಡದಂತೆ ಏನೆಲ್ಲ ಕಠಿಣ ಷರತ್ತುಗಳಿವೆಯೋ ಅವೆಲ್ಲವುಗಳನ್ನು ಒಡ್ಡಿ ಆದೇಶವನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೊರಡಿಸಿದೆ.

ಕಸ್ತೂರಿ ರಂಗನ್ ವರದಿ ಕುರಿತ ಉಭಯ ಸದನಗಳ ಅಧಿವೇಶನದಲ್ಲಿ ಸಮಗ್ರ ಅಧ್ಯಯನ ನಡೆಸಿ ಪರಿಹಾರ ಸೂಚಿಸಿದವರು ಕಡಿಮೆ. ರಾಜಕೀಯ ಬೆರೆಸಿ ಮತ್ತಷ್ಟು ಕಲಸುಮೇಲೋಗರವೇ ಹೆಚ್ಚು. ಈಗೇನೋ ತೆಗೆದುಕೊಂಡ ನಿರ್ಣಯ ಮತ್ತು ನಿವೃತ್ತ ನ್ಯಾಯಾಧೀಶರ ಸಮಿತಿ ರಚನೆ, ವಾಸ್ತವಿಕ ಅಧ್ಯಯನ ಇವೆಲ್ಲ ದಶಕಗಳ ಹಿಂದೆಯೇ ಆಗಬೇಕಾಗಿತ್ತಲ್ಲವೇ?

ಅಂದಿನ ನಿರ್ಲಕ್ಷ್ಯ ಇಂದು ನಾಡಿನ ಜನತೆ ಭಯಗೊಳ್ಳುವಂತಾಗಿದೆ. ಕ್ರೆಡಿಟ್ ವಾರ್ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು, ನೇತಾರರು ತೊಡಗಿದ್ದಾರೆ. ಎರಡು ದಿನಗಳ ಕಸ್ತೂರಿ ರಂಗನ್ ವರದಿ ಕುರಿತ ಚರ್ಚೆ ಮತ್ತು ಕರಾವಳಿಯ ಸಂಪುಟ ಸಭೆ, ಕಲ್ಯಾಣ ಕರ್ನಾಟಕದ 79ನೇ ಧ್ವಜಾರೋಹಣ ಇವೆಲ್ಲವೂ ಕೂಡ, `ಭಾವನೆಗಳ ಮೇಲಿನ ರಾಜಕಾರಣವೇ’ !

ಬದುಕಿನ ಬಗ್ಗೆ ರಾಜಕಾರಣ ಎಂದರೂ ಆಡಿದ್ದು ಮಾತ್ರ ಭಾವನೆಗಳ ಮೇಲೆಯೇ'. ಗಾದೆಯೇ ಇದೆಯಲ್ಲ...ನಾ ಘರ್ ಕಾ….ನಾ ಘಾಟ್‌ಕಾ…’ !!
ಹಾಗಾಗದಿರಲಿ ಎಂಬುದೇ ಜನಾಶಯ