ಕಾಫಿನಾಡಿನ ದೇವೀರಮ್ಮ ಜಾತ್ರೆಯಲ್ಲಿ ದುರಂತ: ಬೆಟ್ಟ ಏರುತ್ತಿದ್ದ ಭಕ್ತ ಹೃದಯಾಘಾತಕ್ಕೆ ಬಲಿ
ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಶಕ್ತಿದೇವತೆ ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆ ಬೆಟ್ಟ ಏರುತ್ತಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಭಕ್ತರಲ್ಲಿ ಶೋಕ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ಗ್ರಾಮದ ನಿವಾಸಿ ಲಕ್ಷ್ಮಣ್ (32) ಮೃತಪಟ್ಟ ದುರ್ದೈವಿ.
ದೇವೀರಮ್ಮನ ದರ್ಶನ ಪಡೆಯುವ ಹಂಬಲದಿಂದ ಶ್ರದ್ಧಾಭಕ್ತಿಯಿಂದ ಬೆಟ್ಟ ಏರುತ್ತಿದ್ದ ವೇಳೆ ಲಕ್ಷ್ಮಣ್ ಅವರಿಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ಅವರು ಬೆಟ್ಟದ ಹಾದಿಯಲ್ಲೇ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಬ್ಬ ಭಕ್ತನಿಗೂ ಅಪಾಯ – ರಕ್ಷಣಾ ಕಾರ್ಯಾಚರಣೆ : ಇದೇ ಸಂದರ್ಭದಲ್ಲಿ ಬೆಟ್ಟದ ಮಾಣಿಕ್ಯಧಾರ ಜಲಪಾತದ ಮಾರ್ಗದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಮಂಡ್ಯ ಮೂಲದ ಸುನೀಲ್ (31) ಎಂಬ ಭಕ್ತರು ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದ ಭಕ್ತರು ಅವರನ್ನು ರಕ್ಷಿಸಿ ಮೇಲಕ್ಕೆ ಕರೆತಂದಿದ್ದಾರೆ. ಅಸ್ವಸ್ಥಗೊಂಡಿದ್ದ ಸುನೀಲ್ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
3,800 ಅಡಿ ಎತ್ತರದ ಬೆಟ್ಟಕ್ಕೆ ಭಕ್ತಸಾಗರ : ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ದೇವೀರಮ್ಮನ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದಲ್ಲಿದೆ. ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬೆಟ್ಟದ ಮೇಲಿರುವ ದೇವಾಲಯದಲ್ಲಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ, ಕಿರಿದಾದ ಹಾಗೂ ಕಡಿದಾದ ಹಾದಿಯಲ್ಲಿ ಬೆಟ್ಟ ಏರಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಈ ಬಾರಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ನವೆಂಬರ್ 7 ಮತ್ತು 8ರಂದು ಮಾತ್ರ ಬೆಟ್ಟ ಏರಲು ಅವಕಾಶ ನೀಡಲಾಗಿತ್ತು. ರಾತ್ರಿ ವೇಳೆ ಬೆಟ್ಟ ಹತ್ತುವುದನ್ನು ನಿರ್ಬಂಧಿಸಲಾಗಿದ್ದು, ಅಪಾಯಕಾರಿ ಸ್ಥಳಗಳಲ್ಲಿ ಹಗ್ಗಗಳು, ಬ್ಯಾರಿಕೇಡ್‌ಗಳು, ವೈದ್ಯಕೀಯ ನೆರವು ಹಾಗೂ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿತ್ತು. ಅಗ್ನಿಶಾಮಕ ದಳದ 10 ರಕ್ಷಣಾ ತಂಡಗಳು ಮತ್ತು 80ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
- ದೇವೀರಮ್ಮನ ಬೆಟ್ಟದಲ್ಲಿ ದುರಂತ: ದರ್ಶನಕ್ಕೆ ತೆರಳುತ್ತಿದ್ದ ಭಕ್ತ ಹೃದಯಾಘಾತದಿಂದ ಸಾವು!
- ಮಮ್ಮುಟ್ಟಿಯ ಮಾಸ್ ಗಿಫ್ಟ್: ‘ಮೇಳ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ!
- ‘ಕಾಕಾ’ ಚಿತ್ರದ ಹೊಸ ಪೋಸ್ಟರ್ ವೈರಲ್, ಬಿಡುಗಡೆ ದಿನಾಂಕ ಪ್ರಕಟ
- ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ನಿಂದ ರಜತ್ ಪಾಟಿದಾರ್ ಔಟ್
- ಸಾಕು ನಾಯಿಗಳಷ್ಟೇ ಅಲ್ಲ, ಬೀದಿನಾಯಿಗಳಿಗೂ ಹಬ್ಬದ ಸಂಭ್ರಮ: ಕುಕುರ್ ತಿಹಾರ್ ವಿಶೇಷತೆ






















