ಬೆಂಗಳೂರು: ಸಿನಿಮಾ ಹಾಗೂ ಕಿರುತೆರೆಯ ಸೆಲೆಬ್ರಿಟಿಗಳ ಲವ್, ನಿಶ್ಚಿತಾರ್ಥ ಮತ್ತು ಮದುವೆಯ ಸುದ್ದಿಗಳು ಸದಾ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತವೆ. ನೆಚ್ಚಿನ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಆ ಹುಡುಗ ಯಾರು ಎಂದು ಹುಡುಕಾಡುವುದು ನೆಟ್ಟಿಗರಿಗೆ ಅಭ್ಯಾಸ. ಇತ್ತೀಚೆಗೆ ಜನಪ್ರಿಯ ನಟಿ ಸ್ಪಂದನಾ ಸೋಮಣ್ಣ ವಿಚಾರದಲ್ಲೂ ಇಂತಹುದೇ ಒಂದು ಘಟನೆ ನಡೆದಿದೆ.
ಪ್ಯಾರಿಸ್ ಪ್ರವಾಸದಲ್ಲಿದ್ದ ಸ್ಪಂದನಾ, ವಿಶ್ವಪ್ರಸಿದ್ಧ ಐಫೆಲ್ ಟವರ್ ಮುಂಭಾಗ ಭಾವಿ ಪತಿಯ ಜೊತೆ ನಿಂತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದ್ರೆ ಫೋಟೋದಲ್ಲಿ ಭಾವಿ ಪತಿಯ ಮುಖ ತೋರಿಸದೆ ಸಸ್ಪೆನ್ಸ್ ಕಾಯ್ದುಕೊಂಡಿದ್ದರು. ಇದನ್ನು ಕಂಡ ನೆಟ್ಟಿಗರು ಆ ‘ಮಿಸ್ಟ್ರಿ ಮ್ಯಾನ್’ ಯಾರೆಂದು ಹುಡುಕಲು ಆರಂಭಿಸಿ, ಆ ವ್ಯಕ್ತಿ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಸೂರಜ್ ಇರಬಹುದು ಎಂದು ಊಹಿಸಿ ಅವರ ಫೋಟೋಗಳನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದರು.
ಈ ವಿಸ್ತಾರವಾದ ಗಾಸಿಪ್ ಹಾಗೂ ಊಹಾಪೋಹಗಳಿಗೆ ವಿಡಿಯೋ ಮೂಲಕ ತೆರೆ ಎಳೆದಿರುವ ಸ್ಪಂದನಾ ಸೋಮಣ್ಣ, ಸ್ಪಷ್ಟನೆ ನೀಡಿದ್ದಾರೆ. “ನಾನು ಮದುವೆಯಾಗುತ್ತಿರುವ ಹುಡುಗ ಸೂರಜ್ ಖಂಡಿತ ಅಲ್ಲ. ಅನಗತ್ಯವಾಗಿ ಅವರ ಫೋಟೋ ಎಡಿಟ್ ಮಾಡಿ ಅವರಿಗೆ ಕಿರಿಕಿರಿ ಉಂಟುಮಾಡಬೇಡಿ” ಎಂದು ಮನವಿ ಮಾಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಇತರ ಹೆಸರುಗಳೂ ಸುಳ್ಳು ಎಂದು ತಿಳಿಸಿದ್ದಾರೆ.
ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವ ಸಂತಸದಲ್ಲಿರುವ ನಟಿ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ. ತಮ್ಮ ನಿಶ್ಚಿತಾರ್ಥದ ದಿನಾಂಕ, ಮದುವೆಯ ಶುಭ ಮುಹೂರ್ತ, ಶಾಪಿಂಗ್ ವಿವರ ಹಾಗೂ ಭಾವಿ ಪತಿಯ ಸಂಪೂರ್ಣ ಪರಿಚಯವನ್ನು ಶೀಘ್ರದಲ್ಲೇ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.






















