ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ, ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಕ್ರಮದಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ, ಪ್ರದೋಷ್ ಜೈಲಿನಲ್ಲಿ ನಿಯಮ ಮೀರಿ ಮೊಬೈಲ್ ಬಳಸಿದ್ದು, ಈ ಮೂಲಕ ನಾಲ್ಕನೇ ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ. ಅವರನ್ನು ಮಾಫಿ ಸಾಕ್ಷಿಯಾಗಿಸುವ ಹಿಂದೆ ದರ್ಶನ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರವಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್, ಕೈದಿಗಳಿಗೆ ಜೈಲು ನಿಯಮದಂತೆ ಕುಟುಂಬದವರೊಂದಿಗೆ ಮಾತನಾಡಲು ಫೋನ್ ಬಳಕೆಗೆ ಅವಕಾಶವಿದೆ ಎಂದು ತಿಳಿಸಿದರು. ಪ್ರದೋಷ್ ಪರ ವಕೀಲ ದಿವಾಕರ್, ಜೈಲು ಅಧಿಕಾರಿಯ ಫೋನ್ ಬಳಸಿ ಪ್ರದೋಷ್ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎಂಬ ಆರೋಪವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
‘ದರ್ಶನ್ ಸೆಲಿಬ್ರಿಟಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕಾನೂನಿಗೆ ಸೆಲಿಬ್ರಿಟಿ ಎಂಬುದು ಗೊತ್ತಿಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿಸುವ ಅಗತ್ಯವಿದ್ದು, ಪ್ರದೋಷ್ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ದರ್ಶನ್ ಪರ ವಕೀಲರಿಗೆ ಕಾನೂನು ಅವಕಾಶವಿದೆ ಎಂದು ಪೀಠ ಹೇಳಿದೆ.
ಇದೀಗ ವಿಚಾರಣಾ ನ್ಯಾಯಾಲಯದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ವಿಚಾರಣೆಗೆ ಒಳಗಾಗಲಿದ್ದು, ಈ ವೇಳೆ ದರ್ಶನ್ ಪರ ವಕೀಲರು ಪಾಟೀ ಸವಾಲಿನ ಮೂಲಕ ಅವರ ಹೇಳಿಕೆಗಳನ್ನು ಪ್ರಶ್ನಿಸಬಹುದಾಗಿದೆ.






















