ಉಡುಪಿ: ಕಸ್ತೂರಿ ರಂಗನ್ ವರದಿ ಜಾರಿಗೂ ಮುನ್ನ ಆ ಭಾಗದ ಜನತೆಯ ಅಹವಾಲು ಆಲಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.
ನವದೆಹಲಿಯ ವಸಂತ್ ಕುಂಜ್ ಪೇಜಾವರ ಶಾಖಾಮಠ ವೇದವ್ಯಾಸ ಗುರುಕುಲದ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ವ್ರತನಿರತರಾಗಿರುವ ಶ್ರೀಗಳನ್ನು ಸೋಮವಾರ ಅಮಿತ್ ಶಾ ಭೇಟಿ ಮಾಡಿ ಆಶೀರ್ವಾದ ಪಡೆದರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಆತಂಕ ಭಯ, ಗೊಂದಲಗಳನ್ನು ನಿವಾಸರಿಸಲು ಆದ್ಯತೆ ನೀಡಬೇಕು ಎಂದು ಶ್ರೀಪಾದರು ಲಿಖಿತ ಮನವಿ ಮಾಡಿದರು. ಈ ಬಗ್ಗೆ ವಿಚಾರ ಮಾಡುವುದಾಗಿ ಶಾ ಭರವಸೆ ನೀಡಿದರು.
ಸಚಿವ ಶಾ ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಡಾ. ವರಖೇಡಿ ಶ್ರೀನಿವಾಸ ಆಚಾರ್ಯ, ಡಾ. ವಿಠೋಬಾಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರಿದ್ದರು.
ಶ್ರೀಕೃಷ್ಣಧಾಮದಲ್ಲಿ ಶ್ರೀಕೃಷ್ಣದೇವರ ದರ್ಶನ ಪಡೆದ ಸಚಿವ ಅಮಿತ್ ಶಾ ಪಂಚದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಸಂಸ್ಥಾನದ ಪಟ್ಟದದೇವರ ದರ್ಶನ, ಶ್ರೀ ವಿಶ್ವೇಶತೀರ್ಥ ಸಂಸ್ಮರಣ ಧ್ಯಾನ ಮಂದಿರಕ್ಕೆ ತೆರಳಿ ಪಾದುಕಾ ದರ್ಶನ ಪಡೆದರು.
ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಫಲಪುಷ್ಪ ಸಮರ್ಪಿಸಿದರು. ಕೆಲಹೊತ್ತು ಆಪ್ತ ಸಮಾಲೋಚನೆ ನಡೆಯಿತು. ಶಾ ಅವರನ್ನು ಶ್ರೀಗಳು ಗೌರವಿಸಿದರು.
ಸಂಸದರಾದ ಬಾನ್ಸುರಿ ಸ್ವರಾಜ್ ಮತ್ತು ರಾಮ ವೀರ್ ಸಿಂಗ್ ಬಿದೂರಿ, ಶಾಸಕರಾದ ಅನಿಲ್ ಶರ್ಮಾ ಮತ್ತು ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್, ವಿದ್ವಾನ್ ಎನ್. ವಿಠಲ ಭಟ್, ಟಿ.ಪಿ. ಅನಂತ, ಶ್ರೀಗಳ ಆಪ್ತಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಮೊದಲಾದವರಿದ್ದರು.




















