SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಎಂಜಿನಿಯರಿಂಗ್‌ಗೆ ಶಾಕ್‌: ಕೃಷಿ, ಪಶುವೈದ್ಯ ಕೋರ್ಸ್‌ಗಳಿಗೆ ಫುಲ್‌ ಡಿಮ್ಯಾಂಡ್‌

ಎಂಜಿನಿಯರಿಂಗ್‌ಗೆ ಶಾಕ್‌: ಕೃಷಿ, ಪಶುವೈದ್ಯ ಕೋರ್ಸ್‌ಗಳಿಗೆ ಫುಲ್‌ ಡಿಮ್ಯಾಂಡ್‌

0
51

ವರ್ಷಿತ ಎಂ. ನಾಗರಾಜ್
ಬೆಂಗಳೂರು: ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಆಯ್ಕೆಯಲ್ಲಿ ಈ ಬಾರಿ ಹೊಸ ಟ್ರೆಂಡ್ ಕಂಡುಬಂದಿದ್ದು, ಪಶು ವೈದ್ಯಕೀಯ ಮತ್ತು ಕೃಷಿ ಕೋರ್ಸ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಮತ್ತೊಂದೆಡೆ, ಒಂದು ಕಾಲದಲ್ಲಿ ಮೊದಲ ಆದ್ಯತೆಯಾಗಿದ್ದ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ 24 ಸಾವಿರಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿದಿವೆ. 2026 ರಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಲ್ಲಿ ಒಟ್ಟು 94,318 ರ ಪೈಕಿ 24,856 ಸೀಟು ಖಾಲಿಯಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಖಾಲಿ ಸೀಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2025ರಲ್ಲಿ ಈ ಕೋರ್ಸ್‌ಗಳಲ್ಲಿ 85,020 ಸೀಟುಗಳಿದ್ದು, ಶೇ. 18.1ರಷ್ಟು ಸೀಟುಗಳು ಖಾಲಿಯಾಗಿದ್ದವು. 2026ರಲ್ಲಿ ಖಾಲಿ ಸೀಟುಗಳ ಪ್ರಮಾಣ ಶೇ. 26.3ಕ್ಕೆ ಏರಿಕೆಯಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಪಶುವೈದ್ಯಕೀಯ ವಿಜ್ಞಾನ ಕೋರ್ಸ್‌ಗಳಲ್ಲಿ ಸೀಟುಗಳು ಬಹುತೇಕ ಸಂಪೂರ್ಣ ಭರ್ತಿಯಾಗಿವೆ. ಕೃಷಿ ಹಾಗೂ ಇತರೆ ಕೃಷಿ ವಿಜ್ಞಾನ ಕೋರ್ಸ್‌ಗಳಲ್ಲಿಯೂ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದ್ದು, ಈ ಕೋರ್ಸ್‌ಗಳಲ್ಲಿ ಖಾಲಿ ಸೀಟುಗಳ ಪ್ರಮಾಣ ಕೇವಲ ಶೇ. 0.5ರಷ್ಟಿದೆ. ಈ ಮುಂಚೆ ಏನಾದರಾಗಲೀ ಇಂಜಿನಿಯರಿಂಗ್ ಸೀಟು ಪಡೆಯಬೇಕು ಎಂದು ವಿದ್ಯಾರ್ಥಿಗಳು ಬಯಸುತ್ತಿದ್ದರು. ಆದರೆ ಇಂಜಿನಿಯರಿಂಗ್ ಪಾಸಾದವರ ಪೈಕಿ ಕೇವಲ ಶೇ 17 ರಷ್ಟು ಜನರಿಗೆ ಮಾತ್ರ ಕೆಲಸ ಸಿಗುತ್ತಿದೆ. ಹಾಗಾಗಿ ಇಂಜಿನಿಯರಿಂಗ್‌ನತ್ತ ವಿದ್ಯಾರ್ಥಿಗಳ ಆಸಕ್ತಿ ತೀರ ಕಡಿಮೆಯಾಗಿದೆ.

ವೃತ್ತಿಪರ ಕೋರ್ಸುಗಳ ಹೊರತುಪಡಿಸಿ ಬಿಎಸ್‌ಸಿ, ಬಿಕಾಂಗೆ ಭರ್ಜರಿ ಬೇಡಿಕೆ ಬಂದಿದೆ. ವೃತ್ತಿಪರ ಕೋರ್ಸ್‌ಗಳ ಪೈಕಿ ಬಿಎಸ್ಸಿ ನರ್ಸಿಂಗ್‌ನಲ್ಲಿ ಶೇ. 63ರಷ್ಟು ಸೀಟುಗಳು ಖಾಲಿ ಉಳಿದಿರುವುದು ಮತ್ತೊಂದು ಗಮನಾರ್ಹ ಅಂಶ. ಒಟ್ಟು 22,831 ಸೀಟುಗಳು ಭರ್ತಿಯಾಗಿಲ್ಲ. ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್‌ನಲ್ಲಿ ಶೇ. 34.1, ಯೋಗ ಮತ್ತು ನ್ಯಾಚುರೋಪತಿಯಲ್ಲಿ ಶೇ. 41.1ರಷ್ಟು ಸೀಟುಗಳು ಖಾಲಿಯಾಗಿವೆ. ಇನ್ನು ಫಾರ್ಮಸಿಯಲ್ಲಿ ಖಾಲಿ ಸೀಟುಗಳ ಪ್ರಮಾಣ ಶೇ. 12.1ಕ್ಕೆ ಇಳಿದಿದ್ದರೆ, ಬ್ಯಾಚುರಲ್ ಆಫ್ ಫಿಸಿಯೋಥೆರಪಿಯಲ್ಲಿ ಶೇ. 1.1ರಷ್ಟು ಸೀಟುಗಳೂ ಭರ್ತಿಯಾಗಿಲ್ಲ.

ಬೇಡಿಕೆಗೆ ತಕ್ಕಂತೆ ವೃತ್ತಿ ಆಯ್ಕೆ ಬದಲು: ಕೆಇಎ ಅಂಕಿ-ಅಂಶಗಳು ವಿದ್ಯಾರ್ಥಿಗಳ ವೃತ್ತಿ ಆಯ್ಕೆಯಲ್ಲಿ ಆಗುತ್ತಿರುವ ಬದಲಾವಣೆಯನ್ನೂ ಸೂಚಿಸುತ್ತಿವೆ. ಉದ್ಯೋಗ ಮಾರುಕಟ್ಟೆಯ ಬೇಡಿಕೆ, ಕೋರ್ಸ್ ಮುಗಿದ ಬಳಿಕದ ಅವಕಾಶಗಳು ಹಾಗೂ ವೃತ್ತಿಯ ಸ್ಥಿರತೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ಬದಲಾಯಿಸುತ್ತಿರುವ ಸಾಧ್ಯತೆ ಇದೆ. ವಿಶೇಷವಾಗಿ ಪಶುವೈದ್ಯಕೀಯ ಮತ್ತು ಕೃಷಿ ವಿಜ್ಞಾನ ಕೋರ್ಸ್‌ಗಳತ್ತ ಹೆಚ್ಚುತ್ತಿರುವ ಒಲವು, ಎಂಜಿನಿಯರಿಂಗ್ ಸೇರಿದಂತೆ ಕೆಲವು ಸಾಂಪ್ರದಾಯಿಕ ಕೋರ್ಸ್‌ಗಳ ಮೇಲಿನ ಆಸಕ್ತಿ ಕುಸಿಯುತ್ತಿರುವುದಕ್ಕೆ ವ್ಯತಿರಿಕ್ತ ಚಿತ್ರಣ ನೀಡಿದೆ. ಹೀಗಾಗಿ ಕೇವಲ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು, ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ವೃತ್ತಿಪರ ಕೋರ್ಸ್‌ಗಳ ಯೋಜನೆ ರೂಪಿಸುವ ಅಗತ್ಯವೂ ಎದುರಾಗಿದೆ.