SK Home Ad
Home ಸುದ್ದಿ ರಾಜ್ಯ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ 10 ದಿನ ಗಡುವು, ಬೇಡಿಕೆ ಈಡೇರದಿದ್ದರೆ ದೇಹತ್ಯಾಗ: ಗುಣಧರ ನಂದಿ...

ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ 10 ದಿನ ಗಡುವು, ಬೇಡಿಕೆ ಈಡೇರದಿದ್ದರೆ ದೇಹತ್ಯಾಗ: ಗುಣಧರ ನಂದಿ ಮಹಾರಾಜ ಘೋಷಣೆ

0
40

ಹುಬ್ಬಳ್ಳಿ: ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಸಮಾಜದ ಪ್ರಮುಖ ಐದು ಬೇಡಿಕೆಗಳನ್ನು ರಾಜ್ಯ ಸರ್ಕಾರ 10 ದಿನಗಳಲ್ಲಿ ಈಡೇರಿಸುವ ಕುರಿತು ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಪಾದಯಾತ್ರೆ, ಹೋರಾಟ ನಡೆಸಿ, ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಸ್ವೀಕರಿಸಿ ದೇಹತ್ಯಾಗ ಮಾಡುತ್ತೇನೆ ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ರಾಷ್ಟçಸಂತ ಶ್ರೀ 1008 ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಳೆದ ಮೂರು ವರ್ಷಗಳಿಂದ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ, ಪ್ರಮುಖ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿ ಚರ್ಚಿಸಲಾಗಿದೆ. ಭರವಸೆ ನೀಡುತ್ತಾರೆಯೇ ಹೊರತು ಬೇಡಿಕೆ ಈಡೇರಿಸುತ್ತಿಲ್ಲ. ಕಳೆದ ಬಾರಿ ಅಂದಿನ ಗೃಹ ಸಚಿವರು ಹಾಗೂ ಈಗಿನ ಉಪಮುಖ್ಯಮಂತ್ರಿ, ಕಂದಾಯ ಸಚಿವರಾದ ಡಾ.ಜಿ. ಪರಮೇಶ್ವರ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. 2 ದಿನ ಸಮಯ ಕೇಳಿದ್ದರು. ಆದರೆ ಅವರು ಉಪಮುಖ್ಯಮಂತ್ರಿ ಆದರೆ ಹೊರತು ನಮ್ಮ ಬೇಡಿಕೆ ಈಡೇರಲಿಲ್ಲ ಎಂದು ಬೇಸ ವ್ಯಕ್ತಪಡಿಸಿದರು.

ಜೈನ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಇನ್ನು ಸಹಿಸಲು ಸಾಧ್ಯವಿಲ್ಲ. ತಾಳ್ಮೆಯ ಕಟ್ಟೆ ಒಡೆದ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಇದು ಅಂತಿಮ ಒತ್ತಾಯ, ಇನ್ನೂ ಸಲ್ಲೇಖನ ವ್ರತ ಮಾಡುವುದೇ ಅಂತಿಮ ಎಂದರು.

10 ದಿನಗಳ ಗಡುವು ಮುಕ್ತಾಯದ ನಂತರ ಒಟ್ಟು ನಾಲ್ಕು ಹಂತದಲ್ಲಿ ಹೋರಾಟ ಮಾಡಲಾಗುವುದು. ಮೊದಲ ಹಂತದಲ್ಲಿ ಜೈನ ಸಮುದಾಯ ಹೆಚ್ಚಿರುವ ಜಮಖಂಡಿ, ತೆರೆದಾಳ, ಕಾಗವಾಡ, ನಿಪ್ಪಾಣಿ, ಅಥಣಿ, ಬೆಳಗಾವಿ ಸೇರಿದಂತೆ 15 ಕಡೆ ಹೋರಾಟ ಮಾಡಿ ಅಲ್ಲಿನ ಶಾಸಕರಿಗೆ ಮನವಿ ಮಾಡಲಾಗುವುದು. ಅವರನ್ನು ನಮ್ಮ ಹೋರಾಟಕ್ಕೆ ಬೆಂಬಲ ಕೊಡುವಂತೆ ಒತ್ತಾಯಿಸಲಾಗುವುದು.

ಇದಾದ ನಂತರ ನವೆಂಬರ್‌ನಲ್ಲಿ ಪಾದಯಾತ್ರೆ ಸತ್ಯಾಗ್ರಹ ನಡೆಸಲಾಗುವುದು. ನಂತರ ಚಿಕ್ಕೋಡಿಯಿಂದ ಸುವರ್ಣ ಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಈ ವೇಳೆ ಪೊಲೀಸರು ತಡೆದರೆ ಎಲ್ಲಿ ತಡೆಯುತ್ತಾರೋ ಅಲ್ಲಿಯೇ ಸಲ್ಲೇಖನ ವೃತ ಆರಂಭಿಸಲಾಗುವುದು ಎಂದರು.

ಇದಕ್ಕೂ ಸರಕಾರ ಬಗ್ಗದಿದ್ದರೆ ಅಂತಿಮವಾಗಿ ಜೈನ ಸಮಾಜದ ನ್ಯಾಯಕ್ಕಾಗಿ ಅಗತ್ಯಬಿದ್ದರೆ ಅನ್ನ-ಜಲ ತ್ಯಜಿಸಿ ಹೋರಾಟ ನಡೆಸುತ್ತೇನೆ. ನನ್ನ ಬೇಡಿಕೆಗಳು ಈಡೇರುವವರೆಗೆ ಹಿಂದೆ ಸರಿಯುವುದಿಲ್ಲ. ಡಿಸೆಂಬರ್‌ನಲ್ಲಿ ಸಲ್ಲೇಖನ ವ್ರತ ಸ್ವೀಕರಿಸುವ ನಿರ್ಧಾರ ಮಾಡಿದ್ದೇನೆ. ಇದು ತಾತ್ಕಾಲಿಕ ಆಕ್ರೋಶದ ನಿರ್ಧಾರವಲ್ಲ; ಸಮಾಜದ ಹಿತಕ್ಕಾಗಿ ಕೈಗೊಂಡಿರುವ ಗಂಭೀರ ನಿರ್ಧಾರ ಎಂದು ಹೇಳಿದರು.

ಗುಣಧರ ನಂದಿ ಶ್ರೀಗಳ 5 ಬೇಡಿಕೆಗಳೇನು?: ಜೈನ ಸಮಾಜದ ಅಭಿವೃದ್ಧಿಗಾಗಿ ಜೈನ ಅಭಿವೃದ್ಧಿ ನಿಗಮ ಅಥವಾ ಮಂಡಳಿ ಸ್ಥಾಪಿಸಬೇಕು. ಜೈನ ಸಾಧು-ಸಾಧ್ವಿಯರ ಸುರಕ್ಷಿತ ಪಾದವಿಹಾರಿಗಳಿಗೆ ಸುರಕ್ಷತಾ ಯೋಜನೆ ರೂಪಿಸಬೇಕು. ಜೈನ ತೀರ್ಥಕ್ಷೇತ್ರಗಳು, ಮಂದಿರಗಳು ಹಾಗೂ ಐತಿಹಾಸಿಕ ಧಾರ್ಮಿಕ ಸಂಸ್ಥೆಗಳ ರಕ್ಷಣೆಗಾಗಿ ವಿಶೇಷ ನಿಯಮ ರೂಪಿಸಬೇಕು. ಆರ್ಥಿಕವಾಗಿ ದುರ್ಬಲರಾದ ಜೈನ ಭಕ್ತರಿಗೆ ಪ್ರತಿವರ್ಷ ಉಚಿತವಾಗಿ ಶ್ರೀ ಸಮ್ಮೇದ ಶಿಖರ್ಜಿ ತೀರ್ಥಯಾತ್ರೆ ಕೈಗೊಳ್ಳಲು ಯೋಜನೆ ಜಾರಿಗೊಳಿಸಬೇಕು. ಪಾದವಿಹಾರದ ಮಾರ್ಗಗಳಲ್ಲಿ ರಾತ್ರಿ ವಿಶ್ರಾಂತಿಗಾಗಿ ಸರ್ಕಾರಿ ವಿಶ್ರಾಂತಿ ಭವನ ಅಥವಾ ಸೂಕ್ತ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಬೇಡಿಕೆಗಳ ಕುರಿತು ಸರ್ಕಾರ ಉನ್ನತ ಮಟ್ಟದ ಸಭೆ ಕರೆಯಬೇಕು. ಸಮಾಜದ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಂಯುಕ್ತ ಸಮಿತಿ ರಚಿಸಬೇಕು. ಪ್ರತಿ ಬೇಡಿಕೆಯ ಪ್ರಸ್ತುತ ಸ್ಥಿತಿ, ಜವಾಬ್ದಾರಿಯುತ ಇಲಾಖೆ ಮತ್ತು ಮುಂದಿನ ಕ್ರಮದ ಕಾಲಮಿತಿಯನ್ನು ಒಳಗೊಂಡ ಲಿಖಿತ ಉತ್ತರವನ್ನು 10 ದಿನಗಳೊಳಗೆ ನೀಡಬೇಕು ಎಂದು ಆಗ್ರಹಿಸಿದರು.