ಕಲಬುರಗಿ: ಜಿಲ್ಲೆಯ ಇಬ್ಬರು ಸೇರಿ ಹೈದರಾಬಾದ್ ಏಜೆನ್ಸಿ ಮೂಲಕ 25 ಮಂದಿ ಮಾನಸ ಸರೋವರ ಯಾತ್ರೆಗೆ ತೆರಳಿದ್ದು, ಮಾರ್ಗಮಧ್ಯೆ ಏಕಾಏಕಿ ಪ್ರವಾಹ ಎದುರಾದ ಹಿನ್ನೆಲೆಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೈದರಾಬಾದ್‌ನಿಂದ ಆ. 21ರಂದು ಯಾತ್ರೆ ಆರಂಭಿಸಿದ್ದ 25 ಮಂದಿ ಯಾತ್ರಿಕರು ಅಮರನಾಥ ಹಾಗೂ ಕೇದಾರನಾಥ ಯಾತ್ರೆ ಪೂರ್ಣಗೊಳಿಸಿ ಬಳಿಕ ಮಾನಸ ಸರೋವರ ಯಾತ್ರೆಗೆ ತೆರಳುತ್ತಿದ್ದರು. ಯಾತ್ರೆಯ ಭಾಗವಾಗಿ ಸುಮಾರು 50 ಕಿ.ಮೀ. ಪರಿಕ್ರಮ ನಡೆಸಬೇಕಿದ್ದು, ಬಹುತೇಕ ದೂರವನ್ನು ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಇವರಲ್ಲಿ ಕಲಬುರಗಿ ಜಿಲ್ಲೆಯ ಇಬ್ಬರು ಯಾತ್ರಿಕರೂ ಇದ್ದಾರೆ.
ಯಾತ್ರಿಕರು ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಅವರ ಮುಂದೆ ಸಾಗುತ್ತಿದ್ದ ಎರಡು ಬಸ್‌ಗಳು ಕಣ್ಣಮುಂದೆಯೇ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡು ಕೊಚ್ಚಿಹೋಗುವ ಪರಿಸ್ಥಿತಿ ಎದುರಾಯಿತು. ಘಟನಾ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿದ್ದಾಗ ಏಜೆನ್ಸಿಯವರು ಚಾಲಕನಿಗೆ ಕರೆ ಮಾಡಿ ಮುಂದೆ ಪ್ರವಾಹ ಉಂಟಾಗಿದೆ ಎಂದು ಎಚ್ಚರಿಕೆ ನೀಡಿದರು.
ತಕ್ಷಣ ಬಸ್ ನಿಲ್ಲಿಸಿದ ಚಾಲಕ ಮುಂದೆ ನೋಡಿದಾಗ ಪ್ರವಾಹದ ನೀರು ರಭಸವಾಗಿ ಹರಿಯುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕೂಡಲೇ ಬಸ್‌ನ್ನು ಹಿಂಬದಿಗೆ ಚಲಾಯಿಸಿ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಎತ್ತರದ ಪ್ರದೇಶಕ್ಕೆ ಕರೆದೊಯ್ದು ಯಾತ್ರಿಕರ ಸುರಕ್ಷತೆ ಖಚಿತಪಡಿಸಿದರು. ಬಳಿಕ ಅಲ್ಲಿಂದ ಕಂಠ್ಮಡುವಿಗೆ ವಾಪಸ್ ಬಂದಿದ್ದಾರೆ.
“ಚಾಲಕ ಸಮಯಪ್ರಜ್ಞೆ ಮೆರೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಪ್ರವಾಹದ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಏಜೆನ್ಸಿಗೂ ಹಾಗೂ ಬಸ್ ಚಾಲಕನಿಗೂ ಧನ್ಯವಾದಗಳು. ಸದ್ಯ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ,” ಎಂದು ಯಾತ್ರಿಕರಾದ ಮಲಿನಾಥ ಕೊಲ್ಕುಂದಿ ತಿಳಿಸಿದ್ದಾರೆ.
ಪ್ರವಾಹದ ದೃಶ್ಯ ಕಣ್ಣಮುಂದೆ ಕಂಡು ಯಾತ್ರಿಕರು ಕೆಲಕಾಲ ಆತಂಕಕ್ಕೊಳಗಾದರೂ, ಚಾಲಕನ ಸಮಯೋಚಿತ ನಿರ್ಧಾರದಿಂದ ಎಲ್ಲರೂ ಸುರಕ್ಷಿತವಾಗಿ ಅಪಾಯದಿಂದ ಪಾರಾಗಿದ್ದಾರೆ.





















