ಶಿವಮೊಗ್ಗ: ತಾಯಿ ಮತ್ತು ಮೂವರು ಮಕ್ಕಳು ರೈಲ್ವೆ ಸೇತುವೆಯಿಂದ ತುಂಗಾ ನದಿಗೆ ಜಿಗಿದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಇಬ್ಬರು ಮಕ್ಕಳು ಕಾಲು ಜಾರಿ ನದಿಗೆ ಬಿದ್ದಿದ್ದು, ಅವರನ್ನು ರಕ್ಷಣೆ ಮಾಡಲು ತಾವು ನದಿಗೆ ಜಿಗಿದಿರುವುದಾಗಿ ತಾಯಿ ಹೇಳಿಕೆ ನೀಡಿದ್ದಾರೆ. ತಾಯಿಯ ಹೇಳಿಕೆ ಆಧಾರದಲ್ಲಿ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಆ. 24ರ ಸಂಜೆ ರೈಲ್ವೆ ಮೇಲ್ಸೇತುವೆಯಿಂದ ತುಂಗಾ ನದಿಗೆ ಜಿಗಿದ ಭವಾನಿ ಮತ್ತು 11 ತಿಂಗಳ ಮಗುವನ್ನು ಸ್ಥಳೀಯರು ರಕ್ಷಿಸಿದ್ದರು. ಸಾನ್ವಿಕಾ (5) ಮತ್ತು ತಾನ್ವಿಕಾ (3) ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಆ ಇಬ್ಬರ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಆ. 24ರಂದು ಮಧ್ಯಾಹ್ನ ಮೂವರು ಮಕ್ಕಳೊಂದಿಗೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಂದಿದ್ದಾಗಿ ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ಮಕ್ಕಳನ್ನು ಲಯನ್ ಸಫಾರಿಗೆ ಕರೆದೊಯ್ಯಲು ಯೋಜಿಸಿದ್ದೆ, ಆದರೆ ಊಟ ಮಾಡಿಸುವಷ್ಟರಲ್ಲಿ ಸಮಯ ಮೀರಿದ್ದರಿಂದ ಪುನಃ ಊರಿಗೆ ತೆರಳಲು ಹೊಳೆ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದೆವು.
ತುಂಗಾ ನದಿ ನೋಡುವ ಸಲುವಾಗಿ ಅರಕೇಶ್ವರ ದೇವಸ್ಥಾನದ ಕಡೆಯಿಂದ ರೈಲ್ವೆ ಸೇತುವೆ ಮೇಲೆ ನಡೆದು ಹೋಗಿದ್ದಾಗ, ಸೇತುವೆ ಮೇಲಿಂದ ಸಾನ್ವಿಕಾ ಮತ್ತು ತಾನ್ವಿಕಾ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು 11 ತಿಂಗಳ ಮಗವಿನೊಂದಿಗೆ ತಾನು ನದಿಗೆ ಜಿಗಿದೆ ಎಂದು ಭವಾನಿ ದೂರಿನಲ್ಲಿ ತಿಳಿಸಿದ್ದಾರೆ.






















