ಹಾವೇರಿ: “ದೇವರ ದೈವತ್ವವು ಭಕ್ತರ ಭಕ್ತಿಯಿಂದ ಹೊರಹೊಮ್ಮುತ್ತದೆ. ಎಲ್ಲಿ ನಿಷ್ಕಲ್ಮಶ ಭಕ್ತಿ ಇರುತ್ತದೆಯೋ ಅಲ್ಲಿ ದೇವರ ಸಾನ್ನಿಧ್ಯ ಮತ್ತು ದೈವಿಕ ಶಕ್ತಿ ಜಾಗೃತಗೊಳ್ಳುತ್ತದೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಶ್ರೀ ಗ್ರಾಮದೇವಿಯ (ದ್ಯಾಮವ್ವ) ನೂತನ ಕಲ್ಲಿನ ದೇವಸ್ಥಾನ ಲೋಕಾರ್ಪಣೆ, ಶ್ರೀ ಗ್ರಾಮದೇವಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ನಾವು ಸಾಮಾನ್ಯವಾಗಿ ದೇವಾಲಯಗಳಿಗೆ ಹೋದಾಗ ದೇವರೆದುರು ಏನನ್ನಾದರೂ ಬೇಡಿಕೊಳ್ಳುತ್ತೇವೆ. ಆದರೆ ಯಾವುದೇ ಷರತ್ತುಗಳಿಲ್ಲದೆ, ಏನನ್ನೂ ಅಪೇಕ್ಷಿಸದೆ ಭಗವಂತನನ್ನು ಪ್ರೀತಿಸುವುದೇ ನಿಜವಾದ ಭಕ್ತಿ. ದೇವರೊಂದಿಗೆ ನಮ್ಮ ಮನಸ್ಸು, ಹೃದಯ ಒಂದಾಗಿ ಸಂಭಾಷಣೆ ನಡೆಸಿದಾಗ ಭಕ್ತಿಯ ಅಮೃತ ಧಾರೆ ಹರಿಯುತ್ತದೆ” ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
”ನಮ್ಮ ಮನಸ್ಸು ಮತ್ತು ಹೃದಯ ಒಂದೇ ಕಡೆ ಏಕಾಗ್ರತೆಯಿಂದ ಭಗವಂತನತ್ತ ನೆಲೆಸಿದಾಗ ಆ ಗಳಿಗೆ ಅಮೃತಗಳಿಗೆಯಾಗುತ್ತದೆ. ಇಂತಹ ಭಕ್ತಿಯ ಸಾಗರವನ್ನು ಉಂಟುಮಾಡುವ ನಮ್ಮ ಆರಾಧ್ಯ ದೈವ ಗ್ರಾಮದೇವತೆಯ ಕೃಪೆ ಪ್ರತಿಯೊಬ್ಬರ ಮೇಲಿರಲಿ” ಎಂದು ಅವರು ಹಾರೈಸಿದರು.
ಅರಿವಿನ ಮಹತ್ವ: “ಹಸಿದವನಿಗೆ ಅನ್ನ, ಹಸಿದಿರುವ ಮೆದುಳಿಗೆ ವೈಚಾರಿಕತೆ ಹಾಗೂ ಹೃದಯಕ್ಕೆ ಅರಿವು ಮೂಡಿಸುವುದೇ ನಿಜವಾದ ಜಗದ್ಗುರುತ್ವ” ಎಂದು ಬೊಮ್ಮಾಯಿ ಬಣ್ಣಿಸಿದರು. ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರು, ಸದಸ್ಯರು ಹಾಗೂ ಉದಾರವಾಗಿ ದೇಣಿಗೆ ನೀಡಿದ ಎಲ್ಲಾ ದಾನಿಗಳಿಗೆ ಈ ಸಂದರ್ಭದಲ್ಲಿ ಅವರು ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ವಿಶ್ವನಾಥ ಚಕ್ರವರ್ತಿಗಳು, ಹಿರಿಯ ಶಾಂತಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಾಗೂ ಶ್ರೀ ಗ್ರಾಮದೇವಿ ಜಾತ್ರಾ ಟ್ರಸ್ಟ್ ಅಧಕ್ಷ ಮಂಜುನಾಥ ನಾಗಜ್ಜನವರ, ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ದೇವಸ್ಥಾನ ಕಮೀಟಿಯ ಸದಸ್ಯರು ಹಾಗೂ ಪ್ರಮುಖರು ಇದ್ದರು.






















