ಹಾವೇರಿ: ಅನಾರೋಗ್ಯದಿಂದ ಏಳು ತಿಂಗಳಿನಿಂದ ಜೀವನ್ಮರಣದ ಹೋರಾಟ ನಡೆಸುತ್ತ, ನಡೆಯಲೂ ಸಾಧ್ಯವಾಗದೆ ಕೋಮಾ ಸ್ಥಿತಿಗೆ ತಲುಪಿದ್ದ ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ಮೆಡಿಕಲ್ ವಿದ್ಯಾರ್ಥಿನಿ ನಿವೇದಿತಾ ನೆಗಳೂರು ಇದೀಗ ಚೇತರಿಸಿಕೊಂಡು ಎದ್ದು ಓಡಾಡುತ್ತಿರುವ ಘಟನೆ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.
ನಿವೇದಿತಾ ಅಂತಿಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆ ಎದುರಿಸಿದ್ದರು. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 21 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರೂ ಆರೋಗ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬರಲಿಲ್ಲ ಎಂದು ವರದಿಯಾಗಿದೆ.
ಈ ನಡುವೆ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಶ್ರೀ ಗುರು ರಾಯರ ಮಠಕ್ಕೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಗಮಿಸಿದ್ದ ಸಂದರ್ಭದಲ್ಲಿ ಕುಟುಂಬಸ್ಥರು ನಿವೇದಿತಾಳನ್ನು ಅವರ ದರ್ಶನಕ್ಕೆ ಕರೆತಂದಿದ್ದರು. ಈ ವೇಳೆ ಸ್ವಾಮೀಜಿ ಅವರು ಐದು ವಾರಗಳಲ್ಲಿ ಅನುಗ್ರಹವಾಗಲಿದೆ ಎಂದು ಆಶೀರ್ವದಿಸಿದ್ದರು.
ಅದರಂತೆ ಕೇವಲ ಮೂರು ವಾರಗಳಲ್ಲೇ ನಿವೇದಿತಾ ಚೇತರಿಸಿಕೊಂಡು ಎದ್ದು ಓಡಾಡತೊಡಗಿದ್ದಾರೆ. ಇದನ್ನು ಕುಟುಂಬಸ್ಥರು ರಾಯರ ಅನುಗ್ರಹ ಎಂದು ಭಾವಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಕೂಡ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಹಾಗೂ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದದಿಂದ ತಾನು ಗುಣಮುಖಳಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಚೇತರಿಸಿಕೊಂಡ ನಿವೇದಿತಾಳಿಗೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ದೂರವಾಣಿ ಮೂಲಕ ಆಶೀರ್ವದಿಸಿ, ರಾಯರ ಮಹಿಮೆ ಅಪಾರವಾಗಿದ್ದು, ನಂಬಿದ ಭಕ್ತರನ್ನು ರಾಯರು ಅನುಗ್ರಹಿಸುತ್ತಾರೆ. ಎಲ್ಲವೂ ಒಳಿತಾಗಲಿ ಎಂದು ಹಾರೈಸಿದ್ದಾರೆ.






















