SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕಾಯಕಜೀವಿಗಳ ಬಳಿ ತೆರಳಿ ಅಹವಾಲು ಆಲಿಸಿದ ಸಚಿವ ಬಸವಂತಪ್ಪ

ಕಾಯಕಜೀವಿಗಳ ಬಳಿ ತೆರಳಿ ಅಹವಾಲು ಆಲಿಸಿದ ಸಚಿವ ಬಸವಂತಪ್ಪ

0
15

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸೋಮವಾರ ಸಂಜೆ ಭೇಟಿ ನೀಡಿದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಅವರು ಸಾರ್ವಜನಿಕರೊಂದಿಗೆ ಬೆರೆತು, ಅವರ ಸಮಸ್ಯೆ-ಅಹವಾಲುಗಳನ್ನು ಆಲಿಸಿದರು.

ರಾಮಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಡಿಕೆ ಸುಲಿಯುವ ಕೆಲಸದಲ್ಲಿ ತೊಡಗಿದ್ದ ಮಹಿಳೆಯರ ಬಳಿ ತೆರಳಿದ ಸಚಿವರು, ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಕೆಲಸದ ಪರಿಸ್ಥಿತಿ ಹಾಗೂ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಕಾಯಕಜೀವಿ ತಾಯಂದಿರ ಶ್ರಮ ಹಾಗೂ ಸ್ವಾವಲಂಬಿ ಬದುಕಿಗಾಗಿ ಅವರು ನಡೆಸುತ್ತಿರುವ ಹೋರಾಟ ಶ್ಲಾಘನೀಯವಾಗಿದೆ. ದುಡಿಯುವ ವರ್ಗದ ಜನರ ಬದುಕನ್ನು ಹತ್ತಿರದಿಂದ ಅರಿತು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಸಚಿವರು ಹೇಳಿದರು.

ಇದೇ ವೇಳೆ ಬಾಡ ಗ್ರಾಮಕ್ಕೂ ಭೇಟಿ ನೀಡಿದ ಸಚಿವ ಬಸವಂತಪ್ಪ ಅವರು ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಕೆಲಕಾಲ ಚಹಾ ಸವಿದು ಆತ್ಮೀಯವಾಗಿ ಮಾತುಕತೆ ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಿರುವ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಾರ್ವಜನಿಕರೊಂದಿಗೆ ಕಳೆಯುವ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ಜನರೊಂದಿಗೆ ಕುಳಿತು ಅವರ ಕಷ್ಟ-ನೋವುಗಳನ್ನು ಆಲಿಸಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.

ಕೂಲಿ ಕಾರ್ಮಿಕರು ಹಾಗೂ ಕಾಯಕಜೀವಿಗಳ ಬಳಿ ತೆರಳಿ ಅವರ ಬದುಕಿನ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುವ ಮೂಲಕ ಜನಸೇವೆಗೆ ಮತ್ತಷ್ಟು ಆದ್ಯತೆ ನೀಡಲಾಗುವುದು. ‘ಜನಸೇವೆಯೇ ಜನಾರ್ಧನ ಸೇವೆ’ ಎಂಬ ಆಶಯದೊಂದಿಗೆ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು. ಸಚಿವರ ಸರಳ ನಡೆ ಹಾಗೂ ಸಾರ್ವಜನಿಕರೊಂದಿಗೆ ನೇರವಾಗಿ ಬೆರೆತು ಅಹವಾಲು ಆಲಿಸಿದ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.