ಬಾಗಲಕೋಟೆ: ನೂತನ ಸಚಿವ ವಿಜಯಾನಂದ ಕಾಶಪ್ಪನವರ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಸ್ವಗ್ರಾಮ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡಬಾರದೆಂದು ಜಗದ್ಗುರುಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಹೇಳಿದ್ದರಂತೆ. ಆದರೆ, ಮುಖ್ಯಮಂತ್ರಿಗಳು ‘ಪಂಚಮಸಾಲಿ ಶ್ರೀಗಳು ನಿನ್ನನ್ನು ಮಂತ್ರಿ ಮಾಡಬಾರದು ಎಂದಿದ್ದಕ್ಕೆ ನಾನು ನಿನ್ನನ್ನು ಮಂತ್ರಿ ಮಾಡುತ್ತಿದ್ದೇನೆ’ ಎಂದು ಹೇಳಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಸಚಿವನಾಗಿದ್ದೇನೆ. ಈಗೇನು ಮಾಡುತ್ತೀಯಪ್ಪಾ ಜಗದ್ಗುರು? ಎಂದು ನೇರವಾಗಿ ಪ್ರಶ್ನಿಸಿದರು.
`ಕಾಂಗ್ರೆಸ್ ಸರ್ಕಾರ ಇರುವವರೆಗೂ ಯಾವುದೇ ಮುಖ್ಯಮಂತ್ರಿಯ ಮನೆಗೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದ್ದೆಯಲ್ಲಪ್ಪಾ, ನಿನ್ನ ನೈತಿಕ ಮಟ್ಟ ಎಲ್ಲಿದೆ? ನಾವು ತೊಟ್ಟ ಬಟ್ಟೆಗೆ ವಿಧೇಯರಾಗಿ ಇರಬೇಕು. ಆದರೆ ನೀನು ಧರಿಸಿದ ಕಾವಿ ಬಟ್ಟೆಗೆ ವಿಧೇಯನಾಗಿದ್ದೀಯಾ? ಸಮಾಜ ನಮಗೆ ಕೊಟ್ಟ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕೇ ಹೊರತು ‘ನನ್ನದೇ ನಡೆಯುತ್ತದೆ’ ಎಂದು ಏನೇನೋ ಮಾತನಾಡಿದರೆ ನಡೆಯುವುದಿಲ್ಲ. ಕೊಲ್ಲುವವರು ನೂರಾರು ಜನರಿದ್ದರೆ, ಕಾಯುವವನು ಒಬ್ಬ ಇರುತ್ತಾನೆ’ ಎಂದು ವಾಗ್ದಾಳಿ ನಡೆಸಿದರು.






















