ಬಾಗಲಕೋಟೆ (ಕುಳಗೇರಿ ಕ್ರಾಸ್): ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಗ್ರಾಮೀಣ ಪ್ರದೇಶದ ಹೆಚ್ಚಿನ ಕ್ರೀಡಾಪಟುಗಳಿಗೆ ಮಾಹಿತಿ ನೀಡಿ, ಅವರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಮೂಲಕ ನಡೆಸಬೇಕಿತ್ತು. ಆದರೆ ಸಮರ್ಪಕ ಪ್ರಚಾರ ಮಾಡದೆ ಕ್ರೀಡಾಕೂಟ ಆಯೋಜಿಸಿರುವುದು ನೈಜ ಗ್ರಾಮೀಣ ಕ್ರೀಡಾಪಟುಗಳಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಸಾರ್ವಜನಿಕರು ಹಾಗೂ ಗ್ರಾಮೀಣ ಕ್ರೀಡಾಪಟುಗಳಿಗೆ ಸಮರ್ಪಕವಾಗಿ ಮಾಹಿತಿ ನೀಡದೆ ಕಾರ್ಯಕ್ರಮ ನಡೆಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ಜಿಲ್ಲಾ ಕ್ರೀಡಾ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದು ಬಂದಿರುವ ಕ್ರೀಡಾಪಟುಗಳಿಗೆ ದಸರಾ ಕ್ರೀಡಾಕೂಟವು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಮುಖ ವೇದಿಕೆಯಾಗಿದೆ. ಹೀಗಾಗಿ ಕ್ರೀಡಾಕೂಟದ ದಿನಾಂಕ, ಸ್ಥಳ ಹಾಗೂ ಸ್ಪರ್ಧೆಗಳ ಕುರಿತು ಗ್ರಾಮಗಳಿಗೆ ತೆರಳಿ ಕ್ರೀಡಾಪಟುಗಳು, ಯುವಕ ಸಂಘಗಳು ಹಾಗೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕಿತ್ತು ಎಂದು ಶಾಸಕ ಚಿಮ್ಮನಕಟ್ಟಿ ಹೇಳಿದರು.
ಅಧಿಕಾರಿಗಳಿಗೆ ತರಾಟೆ: ಸರಿಯಾಗಿ ಪ್ರಚಾರ ಮಾಡದೇ ಸಾರ್ವಜನಿಕರಿಗೆ ತಿಳಿಸಿದೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಸುತ್ತಿರುವುದು ಗಮನಕ್ಕೆ ಬಂದ ತಕ್ಷಣ ಜಿಲ್ಲಾ ಕ್ರೀಡಾ ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ನೀವೆಲ್ಲ ಶ್ರೀಮಂತರ ಮಕ್ಕಳಾ ನೀವು ಗ್ರಾಮೀಣ ಮಟ್ಟದಲ್ಲೇ ಬೆಳೆದವರಲ್ವ? ದಸರಾ ಕ್ರೀಡಾಕೂಟ ಅಂದ್ರೆ ಸುಮ್ನೇನಾ! ನಿಮಗೆಲ್ಲ ಸ್ವಲ್ಪ ಜವಾಬ್ದಾರಿ ಬೇಡ್ವಾ? ಯಾವ ಗ್ರಾಮಕ್ಕೆ ಹೋಗಿದ್ದಿರಿ ಯಾವೆಲ್ಲ ಕ್ರೀಡಾಪಟುಗಳಿಗೆ, ಯುವಕ ಸಂಘದವರಿಗೆ ಮಾಹಿತಿ ಕೊಟ್ಟಿದ್ದಿರೆ ಪೋಟೋ ಸಮೇತ ಸಂಪೂರ್ಣ ಮಾಹಿತಿ ನನಗೆ ನಾಳೆಯೇ ಕೊಡಬೇಕು ಎಂದು ತಾಕಿತು ಮಾಡಿದರು.
ಸರಳತೆಯ(ಸಾಹುಕಾರ) ಶಾಸಕ: ಜನಪ್ರತಿನಿಧಿಗಳ ಕುಟುಂಬದವರೇ ತಪ್ಪು ಮಾಡಿದರೆ ಒಪ್ಪಿಕೊಳ್ಳದ ಈ ಕಾಲದಲ್ಲಿ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಅಧಿಕಾರಿಗಳು ಮಾಡಿದ ತಪ್ಪನ್ನ ತಾವೇ ಹೊತ್ತುಕೊಂಡ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮತ್ತೊಮ್ಮೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವೆ ಎಂದು ಮತ್ತೊಮ್ಮೆ ಸರಳತೆ ಮೆರೆದರು. ಮುಂದಿನ ದಿನಗಳಲ್ಲಿ ತಾಲೂಕಿನ ದೈಹಿಕ ಶಿಕ್ಷಕರು ಈ ಕ್ರೀಡಾಕೂಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗದಂತೆ ನೋಡಿಕೊಳ್ಳಬೇಕು. ದಸರಾ ಕ್ರೀಡಾಕೂಟ ನಡೆಸಿದರೆ ಆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೆಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಹಂಕಾರ ಅಧಿಕಾರ: ಅಸಮಾದಾನಗೊಂಡ ಕ್ಷೇತ್ರದ ಶಾಸಕರು ಅಧಿಕಾರಿಗಳು ಮಾಡಿದ ತಪ್ಪನ್ನ ಒಪ್ಪಿಕೊಂಡರೇ ಹೊರತು ಇವುಗಳಿಗೆಲ್ಲ ಕ್ಯಾರೆ ಎನ್ನದ ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ಧೇಶಕ ಗುರುಪಾದ ಡೂಗನವರ ಏನೂ ತಪ್ಪು ನಡೆದಿಲ್ಲ ಎಂಬಂತೆ ಅಧಿಕಾರಿತನ ಮೆರೆದರೇ ಹೊರತು ಭಾಷಣದಲ್ಲಿ ಯಾವ ತಪ್ಪು ಒಪ್ಪಿಕೊಳ್ಳಲಿಲ್ಲ ಇದು ಸಾರ್ವಜನಿಕರಿಗೆ ಹಾಗೂ ಶಾಸಕರ ಅಭಿಮಾನಿಗಳಿಗೆ ನೋವು ಉಂಟುಮಾಡಿತು.
ಅಸಮಾಧಾನ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಎಂದರೆ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನ ಪ್ರದರ್ಶಿಸುವುದು. ಆದರೆ ನಮಗೆ ಗೊತ್ತಿಲ್ಲದೆ ಈ ಕ್ರೀಡಾಕೂಟ ಏರ್ಪಡಿಸಿರುವುದು ನಮ್ಮ ಮನಸ್ಸಿಗೆ ನೋವು ತಂದಿದೆ ಎಂದು ಕ್ರೀಡಾ ಕೂಟದಲ್ಲಿ ಭಾಗವಹಿಸಿದ ನಿರ್ಣಾಯಕರು ಸೇರಿದಂತೆ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















