ಬಾಗಲಕೋಟೆ: ಅಣ್ಣನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆಂದು ಓಡಿಬಂದ ತಂಗಿ, ಅಣ್ಣನ ಪಾರ್ಥಿವ ಶರೀರ ಕಂಡು ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಹನಗಂಡಿ ಗ್ರಾಮದಲ್ಲಿ ನಡೆದಿದೆ.
ಹನಗಂಡಿ ಗ್ರಾಮದ ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚೆ (46) ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಣ್ಣನ ಅಗಲಿಕೆಯ ಸುದ್ದಿ ತಿಳಿದು ದುಃಖದಲ್ಲೇ ಅಂತ್ಯಕ್ರಿಯೆಗೆಂದು ಆಗಮಿಸಿದ್ದ ಅವರ ಸಹೋದರಿ ಶ್ರೀದೇವಿ ಕಲ್ಲಪ್ಪ ಅಸೋದೆ (37) ಅವರಿಗೆ, ಅಣ್ಣನ ಪಾರ್ಥಿವ ಶರೀರವನ್ನು ಕಂಡ ಕ್ಷಣದಲ್ಲೇ ದುಃಖ ತಡೆಯಲಾಗದೆ ಕುಸಿದುಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಹಾಗೂ ಸ್ಥಳೀಯರು ಮುಂದಾದರೂ, ಅಷ್ಟರಲ್ಲಾಗಲೇ ಶ್ರೀದೇವಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಣ್ಣನನ್ನು ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬಕ್ಕೆ, ಕೆಲವೇ ಕ್ಷಣಗಳಲ್ಲಿ ತಂಗಿಯ ಸಾವಿನ ಆಘಾತವೂ ಎದುರಾಗಿದ್ದು, ಇಡೀ ಕುಟುಂಬವೇ ದುಃಖದ ಮಡುವಿನಲ್ಲಿ ಮುಳುಗಿದೆ. ಅಣ್ಣನ ಅಂತ್ಯಕ್ರಿಯೆಗೆ ಬಂದ ತಂಗಿಯೂ ಅದೇ ದಿನ ವಿಧಿವಶರಾಗಿರುವುದು ಹನಗಂಡಿ ಗ್ರಾಮಸ್ಥರ ಮನಕಲಕಿದೆ.
ಅಣ್ಣ-ತಂಗಿಯ ಅಕಾಲಿಕ ಅಗಲಿಕೆಯಿಂದ ಹನಗಂಡಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಬಂಧು-ಬಳಗದವರ ಕಣ್ಣೀರು ಕಟ್ಟಲಾಗದಂತಾಗಿದೆ.





















