SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಹಸಿರು ಬೆಂಗಳೂರಿಗೆ ಮತ್ತೊಂದು ಹೆಜ್ಜೆ: ‘ಜಿಬಿಎ ಹಸಿರೂರು ಅಭಿಯಾನ’

ಹಸಿರು ಬೆಂಗಳೂರಿಗೆ ಮತ್ತೊಂದು ಹೆಜ್ಜೆ: ‘ಜಿಬಿಎ ಹಸಿರೂರು ಅಭಿಯಾನ’

0
63

ಬೆಂಗಳೂರು: ನಗರದಲ್ಲಿ ಹಸಿರು ವಾತಾವರಣ ಹೆಚ್ಚಿಸುವ ಜೊತೆಗೆ ಸಾರ್ವಜನಿಕರ ಆರೋಗ್ಯಯುತ ಜೀವನಶೈಲಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಜಿಬಿಎ ಹಸಿರೂರು ಅಭಿಯಾನ’ (GBA Tree Plantation Campaign) ಆರಂಭಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಸಚಿವರು, ಬೆಂಗಳೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs), ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.

ಸಾರ್ವಜನಿಕರ ಸಹಭಾಗಿತ್ವದಲ್ಲಿ ಗಿಡ ನೆಡುವ ಯೋಜನೆ : ಸಚಿವರ ಮಾಹಿತಿ ಪ್ರಕಾರ, ನಗರದ ವಿವಿಧ ಬಡಾವಣೆಗಳಲ್ಲಿ ಎಲ್ಲಿ ಗಿಡಗಳನ್ನು ನೆಡಲು ಅವಕಾಶವಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರು ನೀಡಿದರೆ, ಸಂಬಂಧಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸೂಕ್ತವಾದ ಸ್ಥಳಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲೇ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗುತ್ತದೆ. ಈ ಮೂಲಕ ಸರ್ಕಾರಿ ಇಲಾಖೆಗಳು ಮತ್ತು ನಾಗರಿಕರ ಸಹಯೋಗದಲ್ಲಿ ನಗರವನ್ನು ಮತ್ತಷ್ಟು ಹಸಿರುಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಆಗಸ್ಟ್ 15ರಿಂದ ಅಭಿಯಾನ ಆರಂಭ : ‘ಜಿಬಿಎ ಹಸಿರೂರು ಅಭಿಯಾನ’ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಸಾವಿರಾರು ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ನಗರದ ಪರಿಸರ ಸಂರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ, ಹಸಿರು ಹೊದಿಕೆ ಹೆಚ್ಚಳ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣದ ಉದ್ದೇಶದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಆಗಸ್ಟ್ 10ರೊಳಗೆ ಅರ್ಜಿ ಸಲ್ಲಿಸಲು ಅವಕಾಶ : ಗಿಡ ನೆಡುವ ಆಸಕ್ತಿ ಹೊಂದಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಅಪಾರ್ಟ್‌ಮೆಂಟ್ ಸಂಘಗಳು ಹಾಗೂ ಇತರ ಸಂಸ್ಥೆಗಳು ಆಗಸ್ಟ್ 10ರೊಳಗೆ ತಮ್ಮ ಪ್ರದೇಶದಲ್ಲಿ ಗಿಡ ನೆಡುವ ಅಗತ್ಯವಿರುವ ಸ್ಥಳಗಳ ವಿವರಗಳನ್ನು ಸಲ್ಲಿಸಬಹುದು. ಸಾರ್ವಜನಿಕರು ತಮ್ಮ ಮನವಿಯನ್ನು ಅದೀಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್‌ಸೈಟ್: http://gbatreeplantation.com ಇ-ಮೇಲ್: dcfgba26@gmail.com ಮನವಿ ಬಂದ ಬಳಿಕ ಸಂಬಂಧಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗಿಡ ನೆಡುವ ಕಾರ್ಯಯೋಜನೆಯನ್ನು ರೂಪಿಸಲಿದ್ದಾರೆ.

ಪರಿಸರ ಸಂರಕ್ಷಣೆಗೆ ನಾಗರಿಕರ ಪಾತ್ರ ಮುಖ್ಯ : ನಗರಗಳಲ್ಲಿ ವೇಗವಾಗಿ ನಡೆಯುತ್ತಿರುವ ನಗರೀಕರಣದ ನಡುವೆ ಹಸಿರು ಪ್ರದೇಶಗಳ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಗಿಡ ನೆಡುವ ಅಭಿಯಾನ ನಡೆಸುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶವೂ ಇದೆ.

ಸಚಿವ ಕೃಷ್ಣ ಬೈರೇಗೌಡ ಅವರು, “ನಮ್ಮ ನಗರವನ್ನು ಇನ್ನಷ್ಟು ಹಸಿರುಗೊಳಿಸಲು ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು. ನಿಮ್ಮ ಬಡಾವಣೆಯಲ್ಲಿ ಗಿಡ ನೆಡಬಹುದಾದ ಸ್ಥಳಗಳ ಮಾಹಿತಿ ನೀಡಿ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಿಮ್ಮೊಂದಿಗೆ ಸೇರಿ ಗಿಡಗಳನ್ನು ನೆಡಲಿದ್ದಾರೆ” ಎಂದು ಮನವಿ ಮಾಡಿದ್ದಾರೆ.

ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡರೆ, ಬೆಂಗಳೂರಿನ ಹಸಿರು ಹೊದಿಕೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.