SK Home Ad
Home ಸುದ್ದಿ ದೇಶ ಡ್ರಗ್ಸ್‌ ದಂಧೆಗೆ ಬ್ರೇಕ್‌ ಹಾಕಲು ತನಿಖಾ ಸಂಸ್ಥೆಗಳಿಗೆ ಹೈಟೆಕ್‌ ಟಚ್‌

ಡ್ರಗ್ಸ್‌ ದಂಧೆಗೆ ಬ್ರೇಕ್‌ ಹಾಕಲು ತನಿಖಾ ಸಂಸ್ಥೆಗಳಿಗೆ ಹೈಟೆಕ್‌ ಟಚ್‌

0
29

ಪಣಜಿ: ದೇಶದಲ್ಲಿ ಮಾದಕ ದ್ರವ್ಯಗಳ ಕಳ್ಳಸಾಗಣೆ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ತನಿಖಾ ಸಂಸ್ಥೆಗಳನ್ನು ಆಧುನಿಕ ತಂತ್ರಜ್ಞಾನದಿಂದ ಮತ್ತಷ್ಟು ಸಜ್ಜುಗೊಳಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಪಣಜಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾದಂತಹ ಜಾಗತಿಕ ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ರಾಜ್ಯ ಪೊಲೀಸರು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನಡುವೆ ಪರಿಣಾಮಕಾರಿ ಸಮನ್ವಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಅಂತರರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ತ್ವರಿತವಾಗಿ ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ತನಿಖಾ ಸಂಸ್ಥೆಗಳಿಗೆ ಅಗತ್ಯ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

12 ವರ್ಷಗಳಲ್ಲಿ 1.19 ಕೋಟಿ ಕೆಜಿ ಮಾದಕ ವಸ್ತು ವಶ: ಮಾದಕ ದ್ರವ್ಯಗಳ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಾಚರಣೆಯಿಂದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಮಿತ್ ಶಾ ಹೇಳಿದರು.

2004ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ₹40 ಸಾವಿರ ಕೋಟಿ ಮೌಲ್ಯದ 26 ಲಕ್ಷ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, 2014ರಿಂದ 2026ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹1.89 ಲಕ್ಷ ಕೋಟಿ ಮೌಲ್ಯದ 1.19 ಕೋಟಿ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಂಕಿಅಂಶಗಳನ್ನು ಮುಂದಿಟ್ಟರು.

ಮಾದಕ ದ್ರವ್ಯಗಳ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಅಭಿಯಾನ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಅವರು ಪ್ರತಿಪಾದಿಸಿದರು.

ತಲೆಮರೆಸಿಕೊಂಡ 264 ಅಪರಾಧಿಗಳ ಹಸ್ತಾಂತರ: ವಿದೇಶಗಳಲ್ಲಿ ಅಥವಾ ದೇಶದ ಬೇರೆಡೆ ಗಂಭೀರ ಅಪರಾಧ ಎಸಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಕಾನೂನಿನ ಕಟಕಟೆಗೆ ತರಲು ಕೇಂದ್ರ ಸರ್ಕಾರ ವಿಶೇಷ ಅಭಿಯಾನ ನಡೆಸುತ್ತಿದೆ ಎಂದು ಶಾ ತಿಳಿಸಿದರು.

ಈ ಅಭಿಯಾನದಡಿ 2019ರಿಂದ 2026ರ ಜುಲೈವರೆಗೆ 264 ತಲೆಮರೆಸಿಕೊಂಡಿದ್ದ ಅಪರಾಧಿಗಳನ್ನು ಯಶಸ್ವಿಯಾಗಿ ಹಸ್ತಾಂತರಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.