ಬೆಂಗಳೂರು: ಸೆಪ್ಟೆಂಬರ್ 3 ಮತ್ತು 4ರಂದು ಕೋಳಿ ಅಂಗಡಿಗಳನ್ನು ಬಂದ್ ಮಾಡಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನಿರ್ಧರಿಸಿದೆ.
ಕೋಳಿ ಮಾಂಸದ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಕ್ರಮಕ್ಕೆ ಕೋಳಿ ಮಾಂಸ ಮಾರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶುಲ್ಕವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆಗೆ ಸಿದ್ಧವಾಗಿದ್ದಾರೆ.
ಕಳೆದ 15 ದಿನಗಳಿಂದ ಕೋಳಿ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಪ್ರತಿ ಕೋಳಿ ಅಂಗಡಿ ಮಾಲೀಕರಿಗೆ ತಿಂಗಳಿಗೆ ಸುಮಾರು ₹5 ಸಾವಿರದಿಂದ ₹7 ಸಾವಿರದವರೆಗೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯಕ್ಕೆ ಶುಲ್ಕ ಏಕೆ?: ಕೋಳಿ ತ್ಯಾಜ್ಯ ಸಂಗ್ರಹಣೆಗೆ ಸರ್ಕಾರ ಶುಲ್ಕ ವಿಧಿಸಿರುವುದನ್ನು ಪ್ರಶ್ನಿಸಿರುವ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್, ಈ ಹಿಂದೆ ಖಾಸಗಿ ವ್ಯಕ್ತಿಗಳೇ ಕೋಳಿ ತ್ಯಾಜ್ಯವನ್ನು ಹಣ ನೀಡಿ ಖರೀದಿಸಿ ಕೈಗಾರಿಕೆಗಳಿಗೆ ಪೂರೈಸುತ್ತಿದ್ದರು. ಅದೇ ರೀತಿಯಲ್ಲಿ ಈಗಲೂ ಕೋಳಿ ತ್ಯಾಜ್ಯ ಕೈಗಾರಿಕೆಗಳಿಗೆ ರವಾನೆಯಾಗುತ್ತಿದ್ದು, ಅದನ್ನು ಪ್ರಾಣಿಗಳ ಆಹಾರ ತಯಾರಿಕೆಗೆ ಬಳಸಲಾಗುತ್ತಿದೆ. ಹೀಗಿರುವಾಗ ಸರ್ಕಾರ ತ್ಯಾಜ್ಯಕ್ಕಾಗಿ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಿಸುವ ಉದ್ದೇಶವೇನು ಎಂದು ಪ್ರಶ್ನಿಸಿದೆ.
ತ್ಯಾಜ್ಯ ನಿರ್ವಹಣೆಯ ಹೆಸರಿನಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು, ಇದೊಂದು ದೊಡ್ಡ ಮಾಫಿಯಾ ಆಗುವ ಸಾಧ್ಯತೆಯಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬಡ ವ್ಯಾಪಾರಿಗಳಿಗೆ ಹೆಚ್ಚುವರಿ ಹೊರೆ: ಸರ್ಕಾರದ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೋಳಿ ಅಂಗಡಿ ಮಾಲೀಕರು ಹೇಳಿದ್ದಾರೆ. ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಳ್ಳಲು ಕೋಳಿ ಮಾಂಸ ಮಾರಾಟದ ವೃತ್ತಿಯನ್ನು ಅವಲಂಬಿಸಿರುವ ಸಣ್ಣ ವ್ಯಾಪಾರಿಗಳ ಮೇಲೆ ಈ ಶುಲ್ಕ ಹೆಚ್ಚುವರಿ ಆರ್ಥಿಕ ಹೊರೆ ಹಾಕಲಿದೆ ಎಂದು ತಿಳಿಸಿದ್ದಾರೆ.
‘ಈಗಾಗಲೇ ಅಂಗಡಿ ಬಾಡಿಗೆ, ವಿದ್ಯುತ್, ಕಾರ್ಮಿಕರ ವೇತನ ಸೇರಿದಂತೆ ಹಲವು ವೆಚ್ಚಗಳನ್ನು ಭರಿಸುತ್ತಿದ್ದೇವೆ. ಇದರ ನಡುವೆ ಕೋಳಿ ತ್ಯಾಜ್ಯಕ್ಕೂ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸಿದರೆ ತಿಂಗಳಿಗೆ ₹5 ಸಾವಿರದಿಂದ ₹7 ಸಾವಿರದವರೆಗೆ ಹೆಚ್ಚುವರಿ ಖರ್ಚಾಗಲಿದೆ. ಈ ಹೊರೆಯನ್ನು ಸರಿದೂಗಿಸಲು ಸಾಧ್ಯವಿಲ್ಲ. ಸರ್ಕಾರ ಬಡ ಹಾಗೂ ಸಣ್ಣ ವ್ಯಾಪಾರಿಗಳ ಪರವಾಗಿ ನಿಲ್ಲಬೇಕು. ತ್ಯಾಜ್ಯಕ್ಕೆ ಯಾವುದೇ ಶುಲ್ಕ ವಿಧಿಸಬಾರದು’ ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.






















