ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀಲ ಪ್ರಭುಪಾದರ ಇಸ್ಕಾನ್ ಬೆಂಗಳೂರು ವತಿಯಿಂದ ಸೆಪ್ಟೆಂಬರ್ 3 ರಿಂದ 5ರ ವರೆಗೆ ನಗರದ ವಿವಿಧ ಇಸ್ಕಾನ್ ದೇವಾಲಯಗಳಲ್ಲಿ ಅದ್ದೂರಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಳೆದ ನಾಲ್ಕು ದಶಕಗಳಿಂದ ಬೆಂಗಳೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿರುವ ಇಸ್ಕಾನ್, ಈ ಬಾರಿ ಶ್ರೀಕೃಷ್ಣನ 5,253ನೇ ಶುಭ ಜನ್ಮದಿನವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲು ಸಜ್ಜಾಗಿದೆ. ಎಲ್ಲಾ ವಯೋಮಾನದ ಭಕ್ತರು ಭಾಗವಹಿಸಲು ಅನುಕೂಲವಾಗುವಂತೆ ಹಲವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜನ್ಮಾಷ್ಟಮಿ ಅಂಗವಾಗಿ ಭಕ್ತರು ವೈದಿಕ ಸಂಪ್ರದಾಯದಂತೆ ದೇವರಿಗೆ ವಿವಿಧ ಸೇವೆಗಳನ್ನು ಸಲ್ಲಿಸಲಿದ್ದಾರೆ. ಅಭಿಷೇಕ, ಆರತಿ, ಚಪ್ಪನ್ ಭೋಗ್ (56 ಬಗೆಯ ಪ್ರಸಾದ), ಮಖನ್ ಮಿಶ್ರಿ ಸೇವೆ, ಪುಷ್ಪಾಂಜಲಿ, ಪಲ್ಲಕ್ಕಿ ಉತ್ಸವ ಹಾಗೂ ಜುಲನ್ ಸೇವೆ ಸೇರಿದಂತೆ ಹಲವು ವಿಶೇಷ ಸೇವೆಗಳು ನಡೆಯಲಿವೆ.
ಇದರ ಜೊತೆಗೆ ಗೋ ಪೂಜೆ, ಕೋಟಿ ಜಪಯಜ್ಞ, ಗೀತಾ ಪಾರಾಯಣ, ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು, ಮಕ್ಕಳಿಂದ ಶ್ಲೋಕ ಪಠಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗಿದ್ದು, ಭಕ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾದ ವಿತರಿಸಲಾಗುತ್ತದೆ.
ಇಸ್ಕಾನ್ ಸಂಸ್ಥಾಪಕ-ಆಚಾರ್ಯ ಶ್ರೀಲ ಪ್ರಭುಪಾದರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ವಿಶೇಷ ಪ್ರದರ್ಶನವೂ ಭಕ್ತರಿಗೆ ಲಭ್ಯವಿರಲಿದೆ.
‘ಸ್ವಾಗತಂ ಕೃಷ್ಣ’ ಡಿಜಿಟಲ್ ಕಾರ್ಯಕ್ರಮ: ಸೆಪ್ಟೆಂಬರ್ 4ರಂದು ರಾತ್ರಿ 8 ಗಂಟೆಯಿಂದ ‘ಸ್ವಾಗತಂ ಕೃಷ್ಣ’ ಎಂಬ ವಿಶೇಷ ಡಿಜಿಟಲ್ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಭಕ್ತಿ ಗೀತೆಗಳ ಪ್ರದರ್ಶನ, ಜ್ಞಾನವರ್ಧಕ ಭಾಷಣ, ವಿಶೇಷ ಅಭಿಷೇಕ ಮತ್ತು ಆರತಿ ಕಾರ್ಯಕ್ರಮಗಳು ಇದರ ಪ್ರಮುಖ ಆಕರ್ಷಣೆಯಾಗಿವೆ.
ಆನ್‌ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸುವವರು ನೇರ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇರಲಿದೆ.
5,253 ಆಹಾರ ಪದಾರ್ಥಗಳ ನೈವೇದ್ಯ: ಕೆಟಿಪಿಒದಲ್ಲಿ ನಡೆಯಲಿರುವ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ‘ನಿಮ್ಮ ಅಡುಗೆಮನೆಯಿಂದ ಕೃಷ್ಣನಿಗೆ ಪ್ರೀತಿಯಿಂದ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಡಿ 5,253 ಆಹಾರ ಪದಾರ್ಥಗಳನ್ನು ಶ್ರೀಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ಯುವಜನರನ್ನು ಜನ್ಮಾಷ್ಟಮಿ ಆಚರಣೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಯುವ ಬ್ಯಾಂಡ್‌ಗಳಿಂದ ‘ಕೃಷ್ಣ ಜಾಮ್‌ಫೆಸ್ಟ್–ಭಜನ್ ಜಾಮಿಂಗ್’ ಕಾರ್ಯಕ್ರಮವೂ ನಡೆಯಲಿದೆ. ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕಲಾವಿದ ಅಬ್ಬಿ ವಿ ಅವರು ವಿಶೇಷವಾಗಿ ಸಿದ್ಧಪಡಿಸಿರುವ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.
ಭಕ್ತರಿಗೆ ಇಸ್ಕಾನ್ ಆಹ್ವಾನ: ಬೆಂಗಳೂರಿನ ಭಕ್ತರು ತಮ್ಮ ಹತ್ತಿರದ ಇಸ್ಕಾನ್ ಕೇಂದ್ರಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದು ಜನ್ಮಾಷ್ಟಮಿ ಆಚರಣೆಯಲ್ಲಿ ಭಾಗವಹಿಸುವಂತೆ ಇಸ್ಕಾನ್ ಬೆಂಗಳೂರು ಆಹ್ವಾನಿಸಿದೆ. ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕವೂ ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.






















