SK Home Ad
Home ಸುದ್ದಿ ದೇಶ NEET ಪ್ರಕರಣ: ಸಂಜೀವ್ ಮುಖಿಯಾಗೆ CBI ಕ್ಲೀನ್ ಚಿಟ್?

NEET ಪ್ರಕರಣ: ಸಂಜೀವ್ ಮುಖಿಯಾಗೆ CBI ಕ್ಲೀನ್ ಚಿಟ್?

0
87

ನವದೆಹಲಿ: 2024ರ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರೆಂದು ಬಿಂಬಿಸಲಾಗಿದ್ದ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ವಿರುದ್ಧ ನೀಟ್ ಪ್ರಶ್ನೆಪತ್ರಿಕೆ ಕಳ್ಳತನ ಅಥವಾ ವಿತರಣೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಕೇಂದ್ರ ತನಿಖಾ ದಳ (CBI) ಸ್ಪಷ್ಟಪಡಿಸಿದೆ.

ಈ ಕುರಿತು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ, ಬಿಹಾರ ಪೊಲೀಸರ ಪ್ರಾಥಮಿಕ ಎಫ್‌ಐಆರ್‌ನಲ್ಲಿ ಸಂಜೀವ್ ಮುಖಿಯಾ ಹೆಸರು ಉಲ್ಲೇಖವಾಗಿದ್ದರೂ, ತನಿಖೆಯ ವೇಳೆ 2024ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಅವರ ನೇರ ಪಾತ್ರವನ್ನು ಸಾಬೀತುಪಡಿಸುವ ಯಾವುದೇ ದೃಢ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ತಿಳಿಸಿದೆ.

ಎಫ್‌ಐಆರ್‌ನಲ್ಲಿ ಹೆಸರು, ಆದರೆ ಸಾಕ್ಷ್ಯ ಸಿಗಲಿಲ್ಲ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಹಾರ ಪೊಲೀಸರು ದಾಖಲಿಸಿದ್ದ ಪ್ರಾಥಮಿಕ ಎಫ್‌ಐಆರ್‌ನಲ್ಲಿ ಸಂಜೀವ್ ಮುಖಿಯಾ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ ನಂತರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ, ವಿವಿಧ ಸಾಕ್ಷ್ಯಗಳು, ದಾಖಲೆಗಳು ಹಾಗೂ ಆರೋಪಿಗಳ ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ, ಮುಖಿಯಾ ವಿರುದ್ಧ ನೇರವಾಗಿ ಆರೋಪ ಹೊರಿಸಲು ಅಗತ್ಯವಾದ ಸಾಕ್ಷ್ಯಗಳು ದೊರೆತಿಲ್ಲ ಎಂದು ಹೇಳಿದೆ.

45 ಆರೋಪಿಗಳ ವಿರುದ್ಧ ಆರೋಪಪಟ್ಟಿ : ಸಿಬಿಐ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 45 ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿ (Chargesheet) ಸಲ್ಲಿಸಿದೆ. ಆದರೆ ಸಂಜೀವ್ ಮುಖಿಯಾ ವಿರುದ್ಧ ತನಿಖಾ ಸಂಸ್ಥೆ ಕಾನೂನು ನಿಗದಿಪಡಿಸಿರುವ 90 ದಿನಗಳೊಳಗೆ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಲಿಲ್ಲ.

ಇದರಿಂದ ಅವರು ಆಗಸ್ಟ್ 2025ರಲ್ಲಿ ಡೀಫಾಲ್ಟ್ ಜಾಮೀನು (Default Bail) ಪಡೆದಿದ್ದಾರೆ. ಭಾರತೀಯ ಕಾನೂನಿನ ಪ್ರಕಾರ, ತನಿಖಾ ಸಂಸ್ಥೆ ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸದಿದ್ದರೆ ಆರೋಪಿಗೆ ಡೀಫಾಲ್ಟ್ ಜಾಮೀನು ಪಡೆಯುವ ಹಕ್ಕು ಇರುತ್ತದೆ.

ಉದ್ದೇಶಪೂರ್ವಕ ಲೋಪ ಆರೋಪ ತಳ್ಳಿ ಹಾಕಿದ ಸಿಬಿಐ: ಪ್ರಕರಣದಲ್ಲಿ ಸಂಜೀವ್ ಮುಖಿಯಾ ವಿರುದ್ಧ ಉದ್ದೇಶಪೂರ್ವಕವಾಗಿ ಆರೋಪಪಟ್ಟಿ ಸಲ್ಲಿಸಿಲ್ಲ ಎಂಬ ರಾಜಕೀಯ ಆರೋಪಗಳನ್ನು ಸಿಬಿಐ ತಳ್ಳಿಹಾಕಿದೆ. ತನಿಖೆಯ ವೇಳೆ ಲಭ್ಯವಾದ ಸಾಕ್ಷ್ಯಗಳ ಆಧಾರದ ಮೇಲೆಯೇ ಕ್ರಮ ಕೈಗೊಳ್ಳಲಾಗಿದೆ. ಸಾಕ್ಷ್ಯಾಧಾರವಿಲ್ಲದೆ ಯಾರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗುವುದಿಲ್ಲ ಎಂದು ತನಿಖಾ ಸಂಸ್ಥೆ ತನ್ನ ನಿಲುವು ಸ್ಪಷ್ಟಪಡಿಸಿದೆ.

ಫಾಸ್ಟ್ ಟ್ರ್ಯಾಕ್ ಕೋರ್ಟ್ ಚರ್ಚೆ ನಡುವೆ ಬೆಳವಣಿಗೆ : ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಣೆ ಮಾಡಿರುವ ಬೆನ್ನಲ್ಲೇ ಈ ಬೆಳವಣಿಗೆ ಮಹತ್ವ ಪಡೆದಿದೆ.

ಒಂದೆಡೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ವಿರುದ್ಧ ತ್ವರಿತ ವಿಚಾರಣೆ ಮತ್ತು ಕಠಿಣ ಶಿಕ್ಷೆಗೆ ಸರ್ಕಾರ ಒತ್ತು ನೀಡುತ್ತಿರುವಾಗ, ಮತ್ತೊಂದೆಡೆ ಪ್ರಮುಖ ಆರೋಪಿಗಳ ವಿರುದ್ಧ ಸಾಕ್ಷ್ಯಾಭಾವದ ಕಾರಣ ಆರೋಪಪಟ್ಟಿ ಸಲ್ಲಿಕೆಯಾಗದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಪ್ರಸ್ತುತ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದ್ದು, ತನಿಖೆಯಲ್ಲಿ ಹೊಸ ಸಾಕ್ಷ್ಯಗಳು ಲಭ್ಯವಾದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆಯೂ ಇದೆ.