SK Home Ad
Home ಸಿನಿ ಮಿಲ್ಸ್ ಗುಲಾಬಿ ಹೂವಿನಲ್ಲಿ ಜೀವಂತವಾಗಿದ್ದ ಪತಿಯ ನೆನಪು: ಎಸ್. ಜಾನಕಿಯ ಸರಳ ಜೀವನದ ಕಥೆ

ಗುಲಾಬಿ ಹೂವಿನಲ್ಲಿ ಜೀವಂತವಾಗಿದ್ದ ಪತಿಯ ನೆನಪು: ಎಸ್. ಜಾನಕಿಯ ಸರಳ ಜೀವನದ ಕಥೆ

0
95

ಮೈಸೂರು: ಭಾರತೀಯ ಸಂಗೀತ ಲೋಕದ ಗಾನಕೋಗಿಲೆ ಎಸ್. ಜಾನಕಿ ಅವರು ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದಂತೆಯೇ, ತಮ್ಮ ವೈಯಕ್ತಿಕ ಜೀವನದಲ್ಲಿ ಪ್ರೀತಿ, ಬದ್ಧತೆ ಮತ್ತು ಸರಳತೆಯ ಅಪರೂಪದ ಉದಾಹರಣೆಯಾಗಿ ಗುರುತಿಸಿಕೊಂಡಿದ್ದರು. ಅದರಲ್ಲೂ ತಮ್ಮ ಪತಿ ವಿ. ರಾಮಪ್ರಸಾದ್ ಅವರ ಮೇಲಿನ ಅಪಾರ ಪ್ರೀತಿ ಮತ್ತು ಗೌರವವನ್ನು ಜೀವನದ ಕೊನೆಯವರೆಗೂ ಉಳಿಸಿಕೊಂಡಿದ್ದರು.

ಎಸ್. ಜಾನಕಿ ಅವರ ಬದುಕಿನಲ್ಲಿ ಅವರ ಪತಿ ರಾಮಪ್ರಸಾದ್ ಅವರು ಕೇವಲ ಜೀವನ ಸಂಗಾತಿಯಷ್ಟೇ ಅಲ್ಲ, ಅವರ ಪ್ರೇರಣೆ, ಬೆಂಬಲ ಮತ್ತು ಉಸಿರಿನಂತಿದ್ದರು. ಆದರೆ 1997ರಲ್ಲಿ ರಾಮಪ್ರಸಾದ್ ಅವರ ನಿಧನ ಜಾನಕಿಯಮ್ಮ ಅವರನ್ನು ಆಳವಾಗಿ ಕಾಡಿತ್ತು. ಪತಿಯ ಅಗಲಿಕೆಯಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಆಪ್ತರು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: S. Janaki: ಐದು ದಶಕಗಳಿಗೂ ಮೀರಿದ ಅಮೋಘ ಸಂಗೀತ ಪಯಣ

ಬಿಳಿ ಸೀರೆಗಳಲ್ಲೇ ಕಳೆದ ಜೀವನ : ಪತಿ ನಿಧನದ ಬಳಿಕ ಜಾನಕಿ ಅವರು ತಮ್ಮ ಜೀವನಶೈಲಿಯನ್ನೇ ಸಂಪೂರ್ಣವಾಗಿ ಬದಲಿಸಿಕೊಂಡರು. ಬಣ್ಣಬಣ್ಣದ ಸೀರೆಗಳು, ಮಲ್ಲಿಗೆ ಹೂವು ಮತ್ತು ದೊಡ್ಡ ಕುಂಕುಮ ಧರಿಸುವುದನ್ನು ಸಂಪೂರ್ಣವಾಗಿ ತ್ಯಜಿಸಿದರು. ಅಂದಿನಿಂದ ಅವರು ಕೇವಲ ಬಿಳಿ ಅಥವಾ ತಿಳಿ ಬಣ್ಣದ ಸರಳ ಸೀರೆಗಳನ್ನು ಮಾತ್ರ ಧರಿಸಲು ಆರಂಭಿಸಿದರು.

ಅಷ್ಟೇ ಅಲ್ಲದೆ, ಹಣೆಗೆ ಕುಂಕುಮ ಇಡುವ ಬದಲು ವಿಭೂತಿ ಅಥವಾ ನಾಮವನ್ನು ಧರಿಸುತ್ತಿದ್ದರು. ಬಣ್ಣಗಳ ಲೋಕದಲ್ಲಿ ಬದುಕಿದ್ದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಸರಳತೆ ಮತ್ತು ವೈರಾಗ್ಯವನ್ನು ಅಳವಡಿಸಿಕೊಂಡಿದ್ದರು.

ಗುಲಾಬಿ ಹೂವಿನ ಹಿಂದೆ ಅಡಗಿದ್ದ ಪ್ರೇಮಕಥೆ : ಜಾನಕಿಯಮ್ಮ ಅವರು ಎಲ್ಲವನ್ನೂ ತ್ಯಜಿಸಿದ್ದರೂ, ತಮ್ಮ ಪತಿಯ ಮೇಲಿನ ಪ್ರೀತಿಯ ಸಂಕೇತವಾಗಿ ಒಂದು ಸಂಪ್ರದಾಯವನ್ನು ಮಾತ್ರ ಮುಂದುವರಿಸಿದ್ದರು. ಅವರು ತಮ್ಮ ಸೀರೆಗೆ ಸದಾ ಒಂದು ಗುಲಾಬಿ ಹೂವನ್ನು ಮುಡಿದುಕೊಳ್ಳುತ್ತಿದ್ದರು. ಈ ಗುಲಾಬಿ ಹೂವು ಅವರ ಪತಿಯ ಸವಿನೆನಪಿನ ಪ್ರತೀಕವಾಗಿತ್ತು.

ಇದನ್ನೂ ಓದಿ: ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅಂತಿಮ ದರ್ಶನಕ್ಕೆ ಜನಸಾಗರ

ತಮ್ಮ ಜೀವನದ ಕೊನೆಯ ದಿನಗಳವರೆಗೂ ಈ ಸಂಪ್ರದಾಯವನ್ನು ಅವರು ಪಾಲಿಸಿಕೊಂಡು ಬಂದಿದ್ದರು. ಇದು ಅವರ ಪ್ರೀತಿ ಮತ್ತು ಬಾಂಧವ್ಯದ ಆಳವನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಹೇಳುತ್ತಾರೆ.

ರೇಷ್ಮೆ ಸೀರೆಗಳ ದಾನ : ಪತಿ ನಿಧನವಾದ ಕೂಡಲೇ ಜಾನಕಿಯಮ್ಮ ಅವರು ತಮ್ಮ ಬಳಿ ಇದ್ದ ಎಲ್ಲಾ ರೇಷ್ಮೆ ಸೀರೆಗಳನ್ನು ದಾನವಾಗಿ ನೀಡಿದರು. ನಂತರದ ದಿನಗಳಲ್ಲಿ ಯಾರಾದರೂ ಅವರಿಗೆ ಬಿಳಿ ಸೀರೆ ಬಿಟ್ಟು ಬೇರೆ ಬಣ್ಣದ ಸೀರೆಗಳನ್ನು ಉಡುಗೊರೆಯಾಗಿ ನೀಡಿದರೆ, ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ತಕ್ಷಣವೇ ಬೇರೆಯವರಿಗೆ ಕೊಟ್ಟುಬಿಡುತ್ತಿದ್ದರು.

ಅವರ ಈ ಸರಳತೆ, ಉದಾರತೆ ಮತ್ತು ಪತಿಯ ಮೇಲಿನ ಅಪಾರ ಪ್ರೀತಿ ಇಂದು ಅನೇಕರಿಗೆ ಮಾದರಿಯಾಗಿದೆ. ಸಂಗೀತ ಲೋಕದಲ್ಲಿ ಎತ್ತರದ ಸ್ಥಾನದಲ್ಲಿದ್ದರೂ ವೈಯಕ್ತಿಕ ಜೀವನದಲ್ಲಿ ಅತ್ಯಂತ ಸರಳವಾಗಿ ಬದುಕಿದ ಜಾನಕಿಯಮ್ಮ ಅವರ ಬದುಕಿನ ಈ ಅಧ್ಯಾಯ ಈಗ ಮತ್ತೊಮ್ಮೆ ಜನರ ಮನಸ್ಸನ್ನು ತಟ್ಟುತ್ತಿದೆ.