ಬೆಂಗಳೂರು: ಉತ್ತರ ಕನ್ನಡದ ಜೀವ ನದಿಗಳಾದ ಬೇಡ್ತಿ-ಅಘನಾಶಿಸಿನಿ ಉಳಿವಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ 11 ಪ್ರಮುಖ ನಿರ್ಧಾರಗಳನ್ನು ಒಕ್ಕೋರಲಿನಿಂದ ತೆಗೆದುಕೊಳ್ಳಲಾಯಿತು.
ಬೇಡ್ತಿ -ವರದಾ, ಅಘಿನಾಶಿನಿ-ವೇದಾವತಿ ನದಿ ಜೋಡಣೆಯನ್ನು ಕೈ ಬಿಡಬೇಕು, ಪಶ್ಚಿಮ ಘಟ್ಟದಲ್ಲಿ ಹರಿಯುವ 22 ಪ್ರಮುಖ ನದಿ ಕಣಿವೆಗಳ ಸಂರಕ್ಷಣೆಗೆ ಸರ್ಕಾರ ಯೋಜನೆ ರೂಪಿಸಬೇಕು, ಬೇಡ್ತಿ ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ ಯೋಜನೆ ವ್ಯರ್ಥ ಎನ್ನುವುದೂ ಸಹ ಪ್ರಮುಖ ನಿರ್ಣಯಗಳಲ್ಲಿ ಸೇರಿವೆ. ಉತ್ತರ ಕನ್ನಡದ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಆದರೂ ಸರ್ಕಾರವು ಈ ಯೋಜನೆಗಳನ್ನು ಕೈಬಿಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶ್ರೀಗಳ ಸಂದೇಶ: ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಶ್ವರ ಸ್ವಾಮಿಗಳು ಕಳುಹಿಸಿದ ಸಂದೇಶದಲ್ಲಿ ಈ ನದಿಯಲ್ಲಿ ನೀರು ಇಲ್ಲ ಎಂದು ವಿಜ್ಞಾನಿಗಳು ಅನೇಕ ಬಾರಿ ಸಾಬೀತು ಪಡೆಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಉತ್ತರಕನ್ನಡವು ಜಲಕ್ಷಾಮ ಎದುರಿಸಬೇಕಾಗುತ್ತದೆ. ಇದಲ್ಲದೇ ಯಾವುದೋ ಒಂದು ಭಾಗಕ್ಕೆ ನೀರು ಕೊಂಡೊಯ್ಯುತ್ತೇವೆ ಎಂದು ಸರ್ಕಾರ ಹೇಳಿದರೂ ಭವಿಷ್ಯದಲ್ಲಿ ಆ ಯೋಜನೆ ಅಲ್ಲಿಗೆ ತಲುಪುವುದೇ ಪ್ರಯೋಜನವಿಲ್ಲದಂತಾಗುತ್ತದೆ. ಯಾವುದೋ ಒಬ್ಬ ವಿಜ್ಞಾನಿಯ ಸಮ್ಮತಿ ಇಲ್ಲದ ಈ ಯೋಜನೆಯನ್ನು ಸರ್ಕಾರ ಏಕೆ ಮಾಡುತ್ತಿದೆ ಎನ್ನುವುದನ್ನು ನಾವು ಪ್ರಶ್ನಿಸಲೇಬೇಕಾಗುತ್ತದೆ. ಸರ್ಕಾರ ಇನ್ನಾದರೂ ಕಣ್ತೆರೆದು ಉತ್ತರಕನ್ನಡದ ಜನರ ಅಹವಾಲನ್ನು ಸ್ವೀಕರಿಸಲಿ ಎಂದು ಶ್ರೀಗಳು ಆಗ್ರಹಿಸಿದ್ದಾರೆ.
ಸರ್ಕಾರ ತಕ್ಷಣ ಕೈಬಿಡಲಿ: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸರ್ಕಾರ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದು ಸಮಸ್ತ ರಾಜ್ಯದ ಜನರ ಹಿತ ಕಾಯುವ ಸಾಂವಿಧಾನಿಕ ವ್ಯವಸ್ಥೆ. ಪರಿಸರವನ್ನು ನಾಶಮಾಡಿ ಜನಸಾಮಾನ್ಯರಿಗೆ ಅನ್ಯಾಯವೆಸಗುವ ಯೋಜನೆಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದರು.
ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ನಮಗೆ ಕೇವಲ ಭೂಭಾಗವಲ್ಲ, ಅದು ನಮ್ಮ ತಾಯಿ. ಅಭಿವೃದ್ಧಿಯ ಹೆಸರಿನಲ್ಲಿ ಕಾಡು, ನದಿಗಳನ್ನು ಧ್ವಂಸಗೊಳಿಸಿ ನಮ್ಮ ಹೆತ್ತ ತಾಯಿಯನ್ನೇ ಕೊಲ್ಲುವ ಕೃತ್ಯಕ್ಕೆ ಕೈಹಾಕಬೇಡಿ ಎಂದರು. ಕಳೆದ 50-55 ವರ್ಷಗಳಿಂದ ಈ ಕಾಡುಗಳಿಗಾಗಿ, ನದಿಗಳಿಗಾಗಿ, ಕಣಿವೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಬರಲಾಗಿದೆ. ಆದರೂ ಎಗ್ಗಿಲ್ಲದೆ ಪರಿಸರವನ್ನು ನಾಶಮಾಡಲು ಯೋಜನೆಗಳನ್ನು ತರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕರಾದ ಭೀಮಣ್ಣ ನಾಯ್ಕ್. ಶಾಂತಾರಾಮ ಸಿದ್ದಕಿ, ಪತ್ರಕರ್ತ ನಾಗೇಶ ಹೆಗಡೆ, ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ, ಸಾಹಿತಿ ಜಯಂತ್ ಕಾಯ್ಕಿಣಿ ಇದ್ದರು.



















