SK Home Ad
Home ಸಿನಿ ಮಿಲ್ಸ್ ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅಂತಿಮ ದರ್ಶನಕ್ಕೆ ಜನಸಾಗರ

ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅಂತಿಮ ದರ್ಶನಕ್ಕೆ ಜನಸಾಗರ

0
75

ಮೈಸೂರು: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಂದೇ ಪ್ರಸಿದ್ಧರಾಗಿದ್ದ ಎಸ್. ಜಾನಕಿ ಅವರ ನಿಧನದಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶೋಕದ ಛಾಯೆ ಆವರಿಸಿದೆ. ಸಂಗೀತ ಲೋಕದ ಅಪರೂಪದ ಧ್ವನಿಯಾಗಿ ಹಲವು ದಶಕಗಳ ಕಾಲ ತಮ್ಮ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ಅವರು ಇನ್ನು ನೆನಪು ಮಾತ್ರವಾಗಿರುವುದು ಅಭಿಮಾನಿಗಳಿಗೆ ತೀವ್ರ ದುಃಖವನ್ನುಂಟು ಮಾಡಿದೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಬೆಳಗ್ಗಿನಿಂದಲೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮೈದಾನದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದ್ದು, ಅನೇಕರು ಕಣ್ಣೀರು ಹಾಕುತ್ತಲೇ ತಮ್ಮ ನೆಚ್ಚಿನ ಗಾಯಕಿಗೆ ವಿದಾಯ ಹೇಳಿದರು.

ಇದನ್ನೂ ಓದಿ: ಖ್ಯಾತ ಹಿನ್ನೆಲೆ ಗಾಯಕಿ, ಗಾನ ಕೊಗಿಲೆ ಎಸ್. ಜಾನಕಿ ನಿಧನ

ಸಾರ್ವಜನಿಕರ ದರ್ಶನ ಆರಂಭವಾಗುತ್ತಿದ್ದಂತೆಯೇ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಶಿಸ್ತಿನಿಂದ ಅಂತಿಮ ದರ್ಶನ ಪಡೆದರು. ಹಲವರು ಕೈಮುಗಿದು, ಪುಷ್ಪನಮನ ಸಲ್ಲಿಸಿ ತಮ್ಮ ನೆನಪುಗಳನ್ನು ಹಂಚಿಕೊಂಡರು. ಕೆಲವರು ಅವರ ಹಾಡುಗಳನ್ನು ಗುನುಗುತ್ತಾ ಭಾವುಕರಾಗಿರುವ ದೃಶ್ಯ ಕಂಡುಬಂತು.

“ನಾವು ಅವರ ಹಾಡುಗಳನ್ನು ಕೇಳುತ್ತಲೇ ಬೆಳೆದವರು. ಅವರ ಧ್ವನಿ ನಮ್ಮ ಜೀವನದ ಅನೇಕ ಕ್ಷಣಗಳೊಂದಿಗೆ ಬೆಸೆದುಕೊಂಡಿದೆ. ಅವರು ಇನ್ನು ನಮ್ಮೊಂದಿಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಬದುಕಿದ್ದಾಗ ಅವರನ್ನು ನೋಡುವ ಅವಕಾಶ ನಮಗೆ ಸಿಗಲಿಲ್ಲ. ಆದರೆ ಕೊನೆಯ ಬಾರಿಯಾದರೂ ಅವರನ್ನು ನೋಡುವ ಭಾಗ್ಯ ಸಿಕ್ಕಿದೆ. ಮುಂದಿನ ಜನ್ಮದಲ್ಲಿ ಅವರು ನಮ್ಮ ಕರ್ನಾಟಕದಲ್ಲೇ, ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬರಲಿ,” ಎಂದು ಅಭಿಮಾನಿಗಳು ಕಣ್ಣೀರಿನಿಂದ ನಮನ ಸಲ್ಲಿಸಿದರು.

ಇದನ್ನೂ ಓದಿ: S. Janaki: ಐದು ದಶಕಗಳಿಗೂ ಮೀರಿದ ಅಮೋಘ ಸಂಗೀತ ಪಯಣ

ಎಸ್. ಜಾನಕಿ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸುಮಧುರ ಧ್ವನಿ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿದೆ ಎಂದು ಸಂಗೀತಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿರುವ ಅಂತಿಮ ದರ್ಶನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ರಾಜಕೀಯ ಮುಖಂಡರು, ಕಲಾವಿದರು ಹಾಗೂ ಸಂಗೀತಾಸಕ್ತರು ಆಗಮಿಸಿ ಗೌರವ ಸಲ್ಲಿಸುತ್ತಿದ್ದಾರೆ. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.