SK Home Ad
Home ಸಿನಿ ಮಿಲ್ಸ್ ‘ಕರಾವಳಿ’ ಟ್ರೇಲರ್ ರಿಲೀಸ್ ಗಲಾಟೆ; ಪ್ರಜ್ವಲ್ ಆಪ್ತರ ವಿರುದ್ಧ FIR

‘ಕರಾವಳಿ’ ಟ್ರೇಲರ್ ರಿಲೀಸ್ ಗಲಾಟೆ; ಪ್ರಜ್ವಲ್ ಆಪ್ತರ ವಿರುದ್ಧ FIR

0
60

ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರ್ಯಕ್ರಮದ ವೇಳೆ ರಂಪಾಟ ನಡೆಸಿ, ಚಿತ್ರದ ನಿರ್ದೇಶಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದಡಿ ನಟ ಪ್ರಜ್ವಲ್ ದೇವರಾಜ್ ಅವರ ಆಪ್ತರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಗುರುದತ್ ಗಾಣಿಗ ಫಿಲ್ಮ್ಸ್‌ನ ಕಾರ್ಯನಿರ್ವಾಹಕರು ನೀಡಿದ ದೂರಿನ ಆಧಾರದ ಮೇಲೆ ದಿಲೀಪ್, ಅವಿನಾಶ್ ಹಾಗೂ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಯಸ್ಸು 12, ಸಾಧನೆ ಅಪಾರ: ಉದ್ಯಮಿಗಳಿಗೆ ವರವಾದ Ai ಆವಿಷ್ಕಾರ!

ಟ್ರೇಲರ್ ಬಿಡುಗಡೆ ವೇಳೆ ಏನಾಯಿತು? : ಜುಲೈ 7ರಂದು ಬೆಂಗಳೂರಿನ ಗಾಂಧಿನಗರದ ಎಸ್.ಸಿ. ರಸ್ತೆಯಲ್ಲಿರುವ ಕಪಾಲಿ ಮಾಲ್‌ನಲ್ಲಿ ‘ಕರಾವಳಿ’ ಚಿತ್ರದ ಗ್ರ್ಯಾಂಡ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲವರು, ಟ್ರೇಲರ್‌ನಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಧ್ವನಿಯನ್ನು ಬಳಸದೇ ಬೇರೆ ವ್ಯಕ್ತಿಯಿಂದ ಡಬ್ಬಿಂಗ್ ಮಾಡಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವಿಚಾರವಾಗಿ ನಿರ್ದೇಶಕ ಗುರುದತ್ ಗಾಣಿಗ ಅವರೊಂದಿಗೆ ವಾಗ್ವಾದ ನಡೆದಿದ್ದು, ಕೆಲಕಾಲ ಗಲಾಟೆಯ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.

ಇದನ್ನೂ ಓದಿ: ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ

‘ಅವರು ಅಭಿಮಾನಿಗಳಲ್ಲ, ಆಪ್ತರು’ ಎಂದ ನಿರ್ದೇಶಕ : ಘಟನೆಯ ನಂತರ ಮಾತನಾಡಿದ್ದ ನಿರ್ದೇಶಕ ಗುರುದತ್ ಗಾಣಿಗ, ಗಲಾಟೆ ನಡೆಸಿದವರು ಸಾಮಾನ್ಯ ಅಭಿಮಾನಿಗಳಲ್ಲ, ಬದಲಾಗಿ ಪ್ರಜ್ವಲ್ ದೇವರಾಜ್ ಅವರ ಆಪ್ತರು ಎಂದು ಆರೋಪಿಸಿದ್ದರು. ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ಬಂದು ಗೊಂದಲ ಸೃಷ್ಟಿಸಲಾಗಿದೆ ಎಂದು ಅವರು ದೂರಿದ್ದರು.

ಯಾವ ಸೆಕ್ಷನ್‌ಗಳಡಿ ಪ್ರಕರಣ? : ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ 352, 292 ಹಾಗೂ 3(5) ಸೆಕ್ಷನ್‌ಗಳಡಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮ ನಡೆದ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ಅನುಪಮ್ ಖೇರ್ ಹೊಸ ಲುಕ್

ಡಬ್ಬಿಂಗ್ ವಿವಾದದ ಹಿಂದಿನ ಕಾರಣವೇನು? : ಈ ಕುರಿತು ಸ್ಪಷ್ಟನೆ ನೀಡಿದ್ದ ಗುರುದತ್ ಗಾಣಿಗ, ಕರಾವಳಿ ಭಾಷಾ ಶೈಲಿಗೆ ಪ್ರಜ್ವಲ್ ದೇವರಾಜ್ ಅವರ ಧ್ವನಿ ಸರಿಯಾಗಿ ಹೊಂದಿಕೆಯಾಗಲಿಲ್ಲ. ಅದಕ್ಕಾಗಿ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂದು ತಿಳಿಸಿದ್ದರು.

ಸಂಭಾವನೆ ವಿವಾದವೂ ಕಾರಣವೇ? : ಚಿತ್ರತಂಡದ ಮೂಲಗಳ ಪ್ರಕಾರ, ಪ್ರಜ್ವಲ್ ದೇವರಾಜ್ ಅವರಿಗೆ ನೀಡಬೇಕಿದ್ದ ಸಂಭಾವನೆಯ ಪೈಕಿ 25 ಲಕ್ಷ ರೂಪಾಯಿ ಇನ್ನೂ ಬಾಕಿಯಿದೆ ಎನ್ನುವ ಕಾರಣಕ್ಕೂ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಜ್ವಲ್ ದೇವರಾಜ್, “ನನಗೆ ಸಂಪೂರ್ಣ ಸಂಭಾವನೆ ಬಂದಿಲ್ಲ. ಸಂಭಾವನೆ ಬಿಟ್ಟು ಸಿನಿಮಾ ಮಾಡಿಕೊಡುವ ಮಟ್ಟಕ್ಕೆ ನಾನು ಬೆಳೆದಿಲ್ಲ. ಇದು ಮಾತ್ರವೇ ನನ್ನ ಅಸಮಾಧಾನದ ಕಾರಣ” ಎಂದು ಹೇಳಿದ್ದರು.

ಇದನ್ನೂ ಓದಿ: ‘PRC’ ವಿರುದ್ಧ ಅಮಿತ್ ಶಾಗೆ ಪತ್ರ ಬರೆದ ಸಚಿವೆ ಶೋಭಾ ಕರಂದ್ಲಾಜೆ

ಇದಕ್ಕೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ಗುರುದತ್ ಗಾಣಿಗ, “ಪ್ರಜ್ವಲ್ ದೇವರಾಜ್ ಅವರಿಗೆ ಒಟ್ಟು 1 ಕೋಟಿ 25 ಲಕ್ಷ ರೂಪಾಯಿ ಸಂಭಾವನೆ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಈಗಾಗಲೇ 1 ಕೋಟಿ ರೂಪಾಯಿ ನೀಡಲಾಗಿದ್ದು, ಉಳಿದ 25 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದರು.

ಜುಲೈ 24ಕ್ಕೆ ಸಿನಿಮಾ ಬಿಡುಗಡೆ : ಕರಾವಳಿಯ ಹೆಮ್ಮೆಯ ಕ್ರೀಡೆಯಾದ ಕಂಬಳದ ಹಿನ್ನೆಲೆಯನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಸಂಪದಾ, ರಾಜ್ ಬಿ. ಶೆಟ್ಟಿ, ಸುಷ್ಮಿತಾ ಭಟ್, ಮಿತ್ರ, ರಮೇಶ್ ಇಂದಿರಾ ಹಾಗೂ ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಔಷಧಿಗಳ ದುರುಪಯೋಗ ತಡೆಯಲು ಕೇಂದ್ರದ ಮಹತ್ವದ ಕ್ರಮ

ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಬಹುನಿರೀಕ್ಷಿತ ಈ ಚಿತ್ರ ಇದೇ ಜುಲೈ 24ರಂದು ಬಿಡುಗಡೆಯಾಗಲಿದ್ದು, ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ಸಿಲುಕಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.