SK Home Ad
Home ಸುದ್ದಿ ರಾಜ್ಯ ಕ್ಯಾನ್ಸರ್ ಪೀಡಿತ ಮಗನ ಹೋರಾಟದ ಕತೆ ‘ಬ್ಲೇಝ್’ ಕನ್ನಡಕ್ಕೆ

ಕ್ಯಾನ್ಸರ್ ಪೀಡಿತ ಮಗನ ಹೋರಾಟದ ಕತೆ ‘ಬ್ಲೇಝ್’ ಕನ್ನಡಕ್ಕೆ

0
55

ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಅನಾವರಣಗೊಳಿಸುವ ‘ಬ್ಲೇಝ್’ ಕನ್ನಡದ ಕೃತಿ ಬಿಡುಗಡೆಗೆ ಸಜ್ಜು : ಆತ್ಮವಿಕಾಸ ಮತ್ತು ಬದುಕಿನ ಹೋರಾಟದ ಕಥೆ ಬೆಂಗಳೂರಿನಲ್ಲಿ ಲೋಕಾರ್ಪಣೆ

ಹುಬ್ಬಳ್ಳಿ : ಕ್ಯಾನ್ಸರ್ ಪೀಡಿತ ಮಗನನ್ನು ನೋಡಿಕೊಳ್ಳುವ ಸಂದರ್ಭದಲ್ಲಿ ತಂದೆ-ತಾಯಿಯರು ಅನುಭವಿಸುವ ನೋವು, ಹೋರಾಟ, ಆತ್ಮವಿಕಾಸ ಮತ್ತು ಜೀವನದ ಹೊಸ ಅರ್ಥವನ್ನು ಅನಾವರಣಗೊಳಿಸುವ ವಿಶಿಷ್ಟ ಕೃತಿ ‘ಬ್ಲೇಝ್ – ಎ ಸನ್ಸ್ ಟ್ರಯಲ್ ಬೈ ಫೈರ್’ (Blaze: A Son’s Trial By Fire) ಜುಲೈ 11ರಂದು ಕನ್ನಡದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಕೃತಿಯ ಬಿಡುಗಡೆ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: ವಯಸ್ಸು 12, ಸಾಧನೆ ಅಪಾರ: ಉದ್ಯಮಿಗಳಿಗೆ ವರವಾದ Ai ಆವಿಷ್ಕಾರ!

ಬದುಕಿನ ಹೋರಾಟದ ನೈಜ ಕಥೆ : ‘ಬ್ಲೇಝ್’ ಕೃತಿಯು ಕ್ಯಾನ್ಸರ್ ಪೀಡಿತ ಮಗನ ಹೋರಾಟ ಮತ್ತು ಆ ಸಂದರ್ಭದಲ್ಲಿ ಪೋಷಕರು ಅನುಭವಿಸುವ ಭಾವನಾತ್ಮಕ ಪಯಣವನ್ನು ಚಿತ್ರಿಸುತ್ತದೆ. ಇದು ಕೇವಲ ಕಾಯಿಲೆಯ ವಿರುದ್ಧದ ಹೋರಾಟದ ಕಥೆಯಲ್ಲ, ಬದಲಾಗಿ ಸಂಕಷ್ಟದ ಸಂದರ್ಭದಲ್ಲೂ ಧೈರ್ಯ, ಭರವಸೆ ಮತ್ತು ಆತ್ಮವಿಕಾಸದ ಮಹತ್ವವನ್ನು ಸಾರುವ ಜೀವನ ಪಾಠವಾಗಿದೆ.

ಈ ಕೃತಿಯನ್ನು ನಿಧಿ ಪೋದ್ದಾರ್ ಮತ್ತು ಐಆರ್‌ಎಸ್ ಅಧಿಕಾರಿ ಸುಶೀಲ್ ಪೋದ್ದಾರ್ ಇಂಗ್ಲಿಷ್‌ನಲ್ಲಿ ರಚಿಸಿದ್ದು, ಈಗಾಗಲೇ ಮರಾಠಿ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ

ಕನ್ನಡಕ್ಕೆ ಅನುವಾದ : ಕೃತಿಯನ್ನು ಕನ್ನಡಕ್ಕೆ ಹಿರಿಯ ಅನುವಾದಕ ಎಂ.ಸಿ. ಪ್ರಕಾಶ್ ಅನುವಾದಿಸಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಈ ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸಿದೆ.

ಗಣ್ಯರ ಮೆಚ್ಚುಗೆ : ಈ ಪುಸ್ತಕಕ್ಕೆ ಸಮಾಜ ಸೇವಕಿ ಡಾ. ಸುಧಾಮೂರ್ತಿ, ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ಅನುಪಮ್ ಖೇರ್ ಹೊಸ ಲುಕ್

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ: ಕೃತಿಯ ಬಿಡುಗಡೆ ಸಮಾರಂಭದಲ್ಲಿ ಇಸ್ರೋದ ನಿವೃತ್ತ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ಶಿಕ್ಷಣ ತಜ್ಞ ಮತ್ತು ಲೇಖಕ ಡಾ. ಗುರುರಾಜ ಕರಜಗಿ, ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಈ ಕುರಿತು ಮಾಹಿತಿ ನೀಡಿದ್ದು, ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವ ಅನೇಕ ಕುಟುಂಬಗಳಿಗೆ ಈ ಕೃತಿ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.