ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೇರಿಕಾ ಅಮೇರಿಕಾ 2’ ಶೀರ್ಷಿಕೆ ಬಿಡುಗಡೆ – ಇದು ಸೀಕ್ವೆಲ್ ಅಲ್ಲ, ಹೊಸ ಕಥೆ – ಸ್ತ್ರೀ ಪ್ರಧಾನ ಕಥಾಹಂದರದೊಂದಿಗೆ ಬರುತ್ತಿದೆ
ಬೆಂಗಳೂರು: ಕನ್ನಡ ಚಿತ್ರರಂಗದ ಸೂಪರ್‌ಹಿಟ್ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ ‘ಅಮೇರಿಕಾ ಅಮೇರಿಕಾ’ ಬಿಡುಗಡೆಯಾಗಿ ಸುಮಾರು ಮೂರು ದಶಕಗಳು ಕಳೆದರೂ ಅದರ ಜನಪ್ರಿಯತೆ ಇಂದಿಗೂ ಕಡಿಮೆಯಾಗಿಲ್ಲ. ಇದೀಗ ಅದೇ ಶೀರ್ಷಿಕೆಯಲ್ಲಿ ‘ಅಮೇರಿಕಾ ಅಮೇರಿಕಾ 2’ ಎಂಬ ಹೊಸ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದು, ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಅದ್ದೂರಿಯಾಗಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ‘ಅಮೇರಿಕಾ ಅಮೇರಿಕಾ 2’ ಹಿಂದಿನ ಚಿತ್ರದ ಮುಂದುವರಿದ ಭಾಗವಲ್ಲ. ಇದು ಸಂಪೂರ್ಣ ಹೊಸ ಕಥೆ ಮತ್ತು ಹೊಸ ಪಾತ್ರಗಳಿರುವ ಸಿನಿಮಾ. ಹಳೆಯ ಚಿತ್ರದ ಸೂರ್ಯ, ಭೂಮಿ, ಶಶಾಂಕ್ ಪಾತ್ರಗಳಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಚಿತ್ರದ ಕಥೆಯೂ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹದ್ದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಗಣೇಶ್ 2 ದಶಕದ ಸಂಭ್ರಮ: ‘ಬೃಂದಾವಿಹಾರಿ’ ರಿಲೀಸ್ ಡೇಟ್ ಫಿಕ್ಸ್!
ಈ ಚಿತ್ರವು ಲೇಖಕಿ ಸಹನಾ ವಿಜಯಕುಮಾರ್ ಅವರ ಕಾದಂಬರಿ ಆಧಾರಿತವಾಗಿದ್ದು, ಮಹಿಳಾ ಪ್ರಧಾನ ಕಥಾಹಂದರ ಹೊಂದಿದೆ. ನಟಿ ಶಾನ್ವಿ ಶ್ರೀವಾಸ್ತವ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯ ಚಿತ್ರದ ವಿಶೇಷ ಆಕರ್ಷಣೆಯಾಗಲಿದೆ ಎಂದು ನಿರ್ದೇಶಕರು ಹೇಳಿದರು. ಜೊತೆಗೆ ನಿರೂಪ್ ಭಂಡಾರಿ ಹಾಗೂ ಪೃಥ್ವಿ ಅಂಬರ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಇಬ್ಬರ ಪಾತ್ರಗಳಿಗೂ ಕಥೆಯಲ್ಲಿ ಮಹತ್ವದ ಸ್ಥಾನವಿದೆ ಎಂದು ತಿಳಿಸಿದರು.
ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸಂಗೀತ ನಿರ್ದೇಶಕ ಮನೋಮೂರ್ತಿ ನಾಲ್ಕು ಸುಮಧುರ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತವನ್ನು ನಕುಲ್ ಅಭಯಂಕರ್ ಸಂಯೋಜಿಸಿದ್ದಾರೆ. ಛಾಯಾಗ್ರಾಹಕ ಎಸ್.ಕೆ. ರಾವ್ ಅಮೇರಿಕಾದ ಸುಂದರ ಸ್ಥಳಗಳನ್ನು ಮನಮೋಹಕವಾಗಿ ಸೆರೆಹಿಡಿದಿದ್ದು, ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಡ್ರೋನ್ ದೃಶ್ಯಗಳ ಮೂಲಕ ಚಿತ್ರದ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್ Username ವೈಶಿಷ್ಟ್ಯಕ್ಕೆ ಬ್ರೇಕ್ – Metaಗೆ ಕೇಂದ್ರ ನೋಟಿಸ್
ನಟ ನಿರೂಪ್ ಭಂಡಾರಿ ಮಾತನಾಡಿ, ‘ಅಮೇರಿಕಾ ಅಮೇರಿಕಾ’ ಎಂಬ ಶೀರ್ಷಿಕೆಯೇ ತಮ್ಮನ್ನು ಚಿತ್ರದತ್ತ ಸೆಳೆಯಿತು. ಮೂವತ್ತು ವರ್ಷಗಳ ಹಿಂದೆ ಥಿಯೇಟರ್‌ನಲ್ಲಿ ಆ ಸಿನಿಮಾ ನೋಡಿದ ನೆನಪು ಇಂದಿಗೂ ಜೀವಂತವಾಗಿದೆ. ಇದು ಸೀಕ್ವೆಲ್ ಅಲ್ಲದಿದ್ದರೂ, ಅತ್ಯುತ್ತಮ ಕಥೆ ಮತ್ತು ಪಾತ್ರಗಳನ್ನು ಹೊಂದಿದೆ ಎಂದು ಹೇಳಿದರು.
ನಟಿ ಶಾನ್ವಿ ಶ್ರೀವಾಸ್ತವ್ ಮಾತನಾಡಿ, ತಮ್ಮ 13 ವರ್ಷದ ಸಿನಿ ಜೀವನದಲ್ಲಿ ಇಂತಹ ಪಾತ್ರವನ್ನು ಎಂದಿಗೂ ಮಾಡಿಲ್ಲ. ಈ ವಿಭಿನ್ನ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ: ಬೆಂಗಳೂರು: ಕಲ್ಲು ಕ್ವಾರಿ ದುರಂತ – ಬಂಡೆ ಕುಸಿದು 7 ಕಾರ್ಮಿಕರ ಸಾವು
ನಟ ಪೃಥ್ವಿ ಅಂಬರ್ ಮಾತನಾಡಿ, “ನಾಗತಿಹಳ್ಳಿ ಚಂದ್ರಶೇಖರ್ ಅವರು ವಯಸ್ಸಿನಲ್ಲಿ ಹಿರಿಯರಾದರೂ ಉತ್ಸಾಹದಲ್ಲಿ ಯುವಕರಾಗಿದ್ದಾರೆ. ಅವರ ನಿರ್ದೇಶನದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಷಯ” ಎಂದು ಹೇಳಿದರು.
ನಿರ್ಮಾಣದ ಉಸ್ತುವಾರಿ ಹೊತ್ತಿರುವ ಶೋಭ ನಾಗತಿಹಳ್ಳಿ ಚಂದ್ರಶೇಖರ್, ಛಾಯಾಗ್ರಾಹಕ ಎಸ್ ಕೆ ರಾವ್ ಹಾಗೂ ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ಸೇರಿದಂತೆ ಅನೇಕ ತಂತ್ರಜ್ಞರು ” “ಅಮೇರಿಕಾ ಅಮೇರಿಕಾ ೨” ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ: ಉಪನ್ಯಾಸಕನ ವಿರುದ್ಧ FIR
ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಅಮೇರಿಕಾ ಅಮೇರಿಕಾ 2’ ಚಿತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಪ್ರಕಟಿಸಲಿದೆ.






















