SK Home Ad
Home ಸಿನಿ ಮಿಲ್ಸ್ ‘ಪಬ್ಬಾರ್’ ಚಿತ್ರದಲ್ಲಿ ‘ಭಾಗ್ಯದ ಬಳೆಗಾರ’ನಾಗಿ ಶಿವಣ್ಣ ಮಿಂಚು: ಎರಡನೇ ಹಾಡು ‘ಲಾಲಿ ಹಾಡು’ ಬಿಡುಗಡೆ!

‘ಪಬ್ಬಾರ್’ ಚಿತ್ರದಲ್ಲಿ ‘ಭಾಗ್ಯದ ಬಳೆಗಾರ’ನಾಗಿ ಶಿವಣ್ಣ ಮಿಂಚು: ಎರಡನೇ ಹಾಡು ‘ಲಾಲಿ ಹಾಡು’ ಬಿಡುಗಡೆ!

0
31

ಬೆಂಗಳೂರು: ‘ಶಾಖಾಹಾರಿ’ ಖ್ಯಾತಿಯ ನಿರ್ದೇಶಕ ಸಂದೀಪ್ ಸುಂಕದ್ ಆ್ಯಕ್ಷನ್-ಕಟ್ ಹೇಳಿರುವ, ಧೀರೇನ್ ರಾಮ್‌ಕುಮಾರ್ ಹಾಗೂ ಅಮೃತಾ ಪ್ರೇಮ್ ಅಭಿನಯದ ಬಹುನಿರೀಕ್ಷಿತ ‘ಪಬ್ಬಾರ್’ ಚಿತ್ರದ ಎರಡನೇ ಹಾಡು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿರುವ ಈ ಚಿತ್ರದ ‘ಲಾಲಿ ಹಾಡು ಮಮತೆ ಜಾಡು’ ವಿಶೇಷ ಗೀತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ‘ಭಾಗ್ಯದ ಬಳೆಗಾರ’ನಾಗಿ ಹೆಜ್ಜೆ ಹಾಕಿರುವುದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಮಯೂರ್ ಅಂಬೆಕಲ್ಲು ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅನುರಾಗ್ ಕುಲಕರ್ಣಿ ಹಾಗೂ ಮೇಘನಾ ಹಳಿಯಾಳ್ ಧ್ವನಿಯಾಗಿದ್ದಾರೆ.

ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಶಿವರಾಜ್‌ಕುಮಾರ್, “ಇಂದಿನ ಗ್ಲಾಮರ್ ಯುಗದಲ್ಲಿ ‘ಪಬ್ಬಾರ್’ ಒಂದು ಅತ್ಯಂತ ಸೂಕ್ಷ್ಮ ಮತ್ತು ಸಹಜ ಕಥಾಹಂದರದ ಸಿನಿಮಾ. ನಿರ್ದೇಶಕ ಸಂದೀಪ್ ಕೇಳಿಕೊಂಡಾಗ ಖುಷಿಯಿಂದಲೇ ಬಳೆಗಾರನ ಹಾಡಿಗೆ ಹೆಜ್ಜೆ ಹಾಕಿದೆ. ಡಿಸೆಂಬರ್ 11ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ” ಎಂದರು. ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಉತ್ತರ ಭಾರತದ ಕೊರೆಯುವ ಚಳಿಯಲ್ಲಿ ಚಿತ್ರತಂಡ ಪಟ್ಟ ಶ್ರಮವನ್ನು ಶ್ಲಾಘಿಸಿದರು.

ನಾಯಕ ಧೀರೇನ್ ಭಾವುಕರಾಗಿ ಮಾತನಾಡಿ, “ಶಿವಣ್ಣ ಮತ್ತು ಗೀತಾ ಆಂಟಿ ನನ್ನ ದೊಡ್ಡ ಕನಸನ್ನು ನನಸು ಮಾಡಿದ್ದಾರೆ. ಈ ಪಾತ್ರಕ್ಕಾಗಿ 75 ಕೆಜಿಯಿಂದ 63 ಕೆಜಿಗೆ ತೂಕ ಇಳಿಸಿಕೊಂಡೆ. ಹಿಮಾಚಲ ಪ್ರದೇಶದ ಕಿನ್ನೌರ್‌ನಿಂದ ವಾರಣಾಸಿ, ಜೈಪುರ ಹಾಗೂ ಕರ್ನಾಟಕದ ಹಲವೆಡೆ ಒಂದೂವರೆ ವರ್ಷ ಚಿತ್ರೀಕರಣ ನಡೆಸಿದ್ದೇವೆ” ಎಂದು ಪಯಣ ಹಂಚಿಕೊಂಡರು. ನಾಯಕಿ ಅಮೃತಾ ಪ್ರೇಮ್ ಶಿವಣ್ಣ ಅವರೊಂದಿಗೆ ತೆರೆ ಹಂಚಿಕೊಂಡ ಸಂತಸ ವ್ಯಕ್ತಪಡಿಸಿದರೆ, ನಿರ್ದೇಶಕ ಸಂದೀಪ್ ಸುಂಕದ್ 14 ಜಿಲ್ಲೆಗಳ 165 ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಿರುವುದಾಗಿ ತಿಳಿಸಿ, ಥಿಯೇಟರ್‌ಗೆ ಬಂದು ಹರಸುವಂತೆ ಮನವಿ ಮಾಡಿದರು.