ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗಳ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಸದಾ ಒಂದಲ್ಲ ಒಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಯಶ್ ನಟನೆಯ ಮುಂಬರುವ ಪ್ರಾಜೆಕ್ಟ್ ಕುರಿತಾದ ಅಚ್ಚರಿಯ ಮಾಹಿತಿಯೊಂದು ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣವಾದ IMDb ನಲ್ಲಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹಾಗೇ ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಯಶ್ ಈ ಹೊಸ ಚಿತ್ರವು ಆ್ಯಕ್ಷನ್ ಮತ್ತು ಎಮೋಷನಲ್ ಕಥಾಹಂದರವನ್ನು ಹೊಂದಿದೆ. “ವೈಯಕ್ತಿಕ ಕಾರಣಗಳಿಂದಾಗಿ ಭಾರತೀಯ ಸೇನೆಯನ್ನು ತೊರೆಯುವ ಮಿಲಿಟರಿ ಅಧಿಕಾರಿಯೊಬ್ಬ, ನಂತರ ಸ್ಥಳೀಯ ಪೊಲೀಸ್ ಪಡೆಗೆ ಸೇರ್ಪಡೆಗೊಂಡು ಸವಾಲುಗಳನ್ನು ಹೇಗೆ ಎದುರಿಸುತ್ತಾನೆ” ಎಂಬುದು ಚಿತ್ರದ ಪ್ರಮುಖ ಕಥಾಭಾಗವಾಗಿದೆ. ಈ ಸಿನಿಮಾದಲ್ಲಿ ಯಶ್ ‘ಕ್ರೇಜಿ ಮತ್ತು ಮ್ಯಾಡ್ ಪೊಲೀಸ್’ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ನಿರ್ದೇಶನ ಮತ್ತು ತಾರಾಗಣದ ಚರ್ಚೆ: ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಬಾಲಿವುಡ್‌ನ ಜನಪ್ರಿಯ ನಟಿ ತೃಪ್ತಿ ದಿಮ್ರಿ ನಟ ಯಶ್‌ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಈ ಹಿಂದೆ ಯಶ್ ಮತ್ತು ನರ್ತನ್ ಜೋಡಿಯ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು, ಆದ್ರೆ ಅದು ವಿಳಂಬವಾಗಿತ್ತು. ಇದೀಗ ಈ ಸುದ್ದಿಯಿಂದಾಗಿ ಆ ಪ್ರಾಜೆಕ್ಟ್ ಮತ್ತೆ ಜೀವ ಪಡೆದುಕೊಂಡಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಸತ್ಯಾಸತ್ಯತೆ ಏನು?: IMDbಯಲ್ಲಿ ಕಾಣಿಸಿಕೊಂಡಿರುವ ಈ ಮಾಹಿತಿ ಎಷ್ಟರಮಟ್ಟಿಗೆ ಅಧಿಕೃತ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅನೇಕರು ಇದು ತಾಂತ್ರಿಕವಾಗಿ ಎಡಿಟ್ ಮಾಡಲಾದ ಅಥವಾ ಅಸತ್ಯವಾದ ಮಾಹಿತಿ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಯಶ್ ಸದ್ಯ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಲೀಕ್ ಆದ ಮಾಹಿತಿ ನಿಜವೇ ಅಥವಾ ಬರೀ ವದಂತಿಯೇ ಎಂಬುದನ್ನು ಕಾದು ನೋಡಬೇಕಿದೆ.






















