ವಿಜಯೇಂದ್ರ ನಾಯಕತ್ವದ ಬಗ್ಗೆ ಆಡಿಯೋ ಬಾಂಬ್; ಕೇಸರಿ ಪಾಳಯದಲ್ಲಿ ತಲ್ಲಣ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಧ್ವನಿಯನ್ನೇ ಹೋಲುವ ವೈರಲ್ ಆಡಿಯೋ ರಾಜ್ಯ ಬಿಜೆಪಿ ಪಾಳಯದಲ್ಲಿ ಹೊಸ ಚರ್ಚೆ ಮತ್ತು ತಲ್ಲಣಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಆಡಿಯೋದಲ್ಲಿ, ವಿಜಯೇಂದ್ರ ಅವರನ್ನು ತಕ್ಷಣವೇ ಹುದ್ದೆಯಿಂದ ತೆಗೆದುಹಾಕುವ ಬದಲು ಅವರ ಅವಧಿ ಪೂರ್ಣಗೊಳ್ಳುವವರೆಗೆ ಮುಂದುವರಿಯಲು ಅವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿರುವುದು ಕೇಳಿಬಂದಿದೆ.
ಇದನ್ನೂ ಓದಿ: SIR ಆತಂಕವೇ: ಜೂನ್ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ
ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿಯ ಧ್ವನಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಧ್ವನಿಯನ್ನು ಹೋಲುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ನಡೆದಿರುವ ಸಂಭಾಷಣೆಯಲ್ಲಿ, “ವಿಜಯೇಂದ್ರ ಅವರ ಅವಧಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿದ್ದು, ಈಗ ಅವರನ್ನು ಹುದ್ದೆಯಿಂದ ತೆಗೆದುಹಾಕಿದರೆ ಅನಗತ್ಯ ಗೊಂದಲ ಉಂಟಾಗಬಹುದು. ಅವರ ಅವಧಿ ಪೂರ್ಣಗೊಂಡ ಬಳಿಕ ಬದಲಾವಣೆ ಮಾಡಿದರೆ ಪಕ್ಷದೊಳಗೆ ಗೊಂದಲ ಸೃಷ್ಟಿಯಾಗುವುದಿಲ್ಲ” ಎಂಬ ಅಭಿಪ್ರಾಯ ವ್ಯಕ್ತವಾಗಿರುವುದು ಕೇಳಿಬಂದಿದೆ.
ಇದೇ ವೇಳೆ, “ಅಕ್ಟೋಬರ್ ವೇಳೆಗೆ ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸಬಹುದು. ಈಗಲೇ ಯಾವುದೇ ಕ್ರಮ ಕೈಗೊಂಡರೆ ಅವರ ಬೆಂಬಲಿಗರು ಎಚ್ಚೆತ್ತುಕೊಳ್ಳಬಹುದು. ಆದ್ದರಿಂದ ಅವಧಿ ಪೂರ್ಣಗೊಂಡ ಬಳಿಕ ಬದಲಾವಣೆ ಮಾಡುವುದು ಸೂಕ್ತ” ಎಂಬ ಮಾತುಗಳೂ ಆಡಿಯೋದಲ್ಲಿ ಕೇಳಿಬಂದಿವೆ.
ಇದನ್ನೂ ಓದಿ: ಭೂಕುಸಿತದಲ್ಲಿ ಸಿಲುಕಿ ಪಾರಾದ ಬೈಕ್ ಸವಾರ: Video ವೈರಲ್
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ಇನ್ನೂ ಕೆಲವೇ ತಿಂಗಳಲ್ಲಿ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ರಾಜ್ಯಾಧ್ಯಕ್ಷರ ಹುದ್ದೆಯ ಅವಧಿ ಮೂರು ವರ್ಷಗಳಿರುವ ಹಿನ್ನೆಲೆಯಲ್ಲಿ ಈ ವೈರಲ್ ಆಡಿಯೋ ಪಕ್ಷದೊಳಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಆದರೆ, ವೈರಲ್ ಆಗಿರುವ ಆಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು, “ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದು ನನ್ನ ಆಡಿಯೋ ಅಲ್ಲ, ನನ್ನದಲ್ಲದ ವಿಡಿಯೋ ಅಥವಾ ಆಡಿಯೋ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದರ ಸತ್ಯಾಸತ್ಯತೆಯನ್ನು ನೀವೇ ಕಂಡುಹಿಡಿಯಿರಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಮತ್ತೆ ಖರ್ಗೆ ಪಯಣ: ಪ್ರಮಾಣ ವಚನ ಸ್ವೀಕಾರ
ವೈರಲ್ ಆಗಿರುವ ಆಡಿಯೋದ ಸತ್ಯಾಸತ್ಯತೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಹೀಗಾಗಿ, ಈ ಆಡಿಯೋ ಕುರಿತು ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಆಡಿಯೋದ ನೈಜತೆ ಸ್ವತಂತ್ರವಾಗಿ ದೃಢಪಟ್ಟಿಲ್ಲ. ಆದ್ದರಿಂದ ಅದರ ಸತ್ಯಾಸತ್ಯತೆ ಕುರಿತು ಅಧಿಕೃತ ಸ್ಪಷ್ಟನೆ ಬರುವವರೆಗೂ ಊಹಾಪೋಹಗಳಿಗೆ ಅವಕಾಶ ನೀಡದಂತೆ ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.






















