ಇಟಾನಗರ: ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ ಸಿಜಿ ಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾದ ಭಾರೀ ಭೂಕುಸಿತವು ಆತಂಕ ಸೃಷ್ಟಿಸಿದ್ದು, ಘಟನೆಯಲ್ಲಿ ಮೋಟಾರ್‌ಸೈಕಲ್ ಸವಾರನೊಬ್ಬ ಪರ್ವತದ ಇಳಿಜಾರಿನಿಂದ ಸಿಜಿ ನದಿಗೆ ಬಿದ್ದರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಬದುಕುಳಿದಿರುವುದು ಅಚ್ಚರಿಯ ಸಂಗತಿಯಾಗಿದೆ.
ಭಾರೀ ಭೂಕುಸಿತದ ನಡುವೆ ಮೋಟಾರ್‌ಸೈಕಲ್ ಸವಾರನೊಬ್ಬ ಮಣ್ಣಿನ ಕುಸಿತದ ನಡುವೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಲೋವರ್ ಸಿಯಾಂಗ್ ಜಿಲ್ಲೆಯ ಸಿಜಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿದೆ.
ಇದನ್ನೂ ಓದಿ: SIR ಆತಂಕವೇ: ಜೂನ್ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ
ಭೂಕುಸಿತದ ವೇಳೆ ರಸ್ತೆ ಮೂಲಕ ಸಂಚರಿಸುತ್ತಿದ್ದ ಮೋಟಾರ್‌ಸೈಕಲ್ ಸವಾರನೊಬ್ಬ ಮಣ್ಣು ಮತ್ತು ಕಲ್ಲುಗಳೊಂದಿಗೆ ನದಿಗೆ ಉರುಳಿದ್ದಾನೆ. ಸ್ಥಳೀಯರು ಮತ್ತು ರಕ್ಷಣಾ ತಂಡದ ನೆರವಿನಿಂದ ಆತನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಆತ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತದಿಂದ ಅಪಾರ ಪ್ರಮಾಣದ ಮಣ್ಣು, ಬಂಡೆಗಳು ಹಾಗೂ ಮರಗಳು ಸಿಜಿ ನದಿಗೆ ಬಿದ್ದ ಪರಿಣಾಮ ನದಿಯ ಹರಿವು ಸಂಪೂರ್ಣ ತಡೆಯಲ್ಪಟ್ಟಿದೆ. ಇದರಿಂದ ತಾತ್ಕಾಲಿಕ ನೈಸರ್ಗಿಕ ಅಣೆಕಟ್ಟು ನಿರ್ಮಾಣವಾಗಿದ್ದು, ಅದರ ಹಿಂದಿನ ಭಾಗದಲ್ಲಿ ಕೃತಕ ಸರೋವರವೂ ರೂಪುಗೊಂಡಿದೆ.
ಇದನ್ನೂ ಓದಿ: ಸೂಪಾ ಜಲಾಶಯ ಖಾಲಿ ಖಾಲಿ: ವಿದ್ಯುತ್ ಉತ್ಪಾದನೆ ಮೇಲೆ ಕರಿನೆರಳು
ಈ ಬೆಳವಣಿಗೆಯಿಂದಾಗಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಹಾಗೂ ಯಾವುದೇ ಸಮಯದಲ್ಲಿ ನೈಸರ್ಗಿಕ ಅಣೆಕಟ್ಟು ಒಡೆದು ಭಾರಿ ಪ್ರಮಾಣದ ನೀರು ಕೆಳಭಾಗದ ಪ್ರದೇಶಗಳಿಗೆ ಹರಿದು ಬರುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂನ ಕೆಲವು ಭಾಗಗಳು ಸೇರಿದಂತೆ ಕೆಳಮಟ್ಟದ ಪ್ರದೇಶಗಳಿಗೆ ಅಧಿಕಾರಿಗಳು ಪ್ರವಾಹ ಎಚ್ಚರಿಕೆ ನೀಡಿದ್ದಾರೆ.
ನದಿ ದಂಡೆಯ ಸಮೀಪ ವಾಸಿಸುವ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯವಿದ್ದಲ್ಲಿ ಸ್ಥಳಾಂತರಕ್ಕೆ ಸಿದ್ಧರಾಗುವಂತೆ ಸೂಚಿಸಲಾಗಿದೆ. ನದಿ ತೀರ ಪ್ರದೇಶಗಳಲ್ಲಿ ಅನಗತ್ಯ ಓಡಾಟ ನಡೆಸದಂತೆ ಆಡಳಿತ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಭೀಕರ ದುರಂತ: ಕಟ್ಟಡದ ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳ ಸಾವು
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸ್ಥಳೀಯ ಆಡಳಿತ ಹಾಗೂ ರಕ್ಷಣಾ ತಂಡಗಳು ಪರಿಸ್ಥಿತಿಯನ್ನು ನಿರಂತರವಾಗಿ ನಿಗಾ ವಹಿಸಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿವೆ. ಭೂಕುಸಿತದ ಪ್ರದೇಶದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಸ್ಥಳೀಯ ಆಡಳಿತ ಜನರು ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸುವಂತೆ ಮನವಿ ಮಾಡಿದೆ.





















