ಬೆಂಗಳೂರು: ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಖಾಸಗಿ ಅಥವಾ ಆಪ್ತ ಚಿತ್ರಗಳು ಮತ್ತು ವೀಡಿಯೊಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವುದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ತಕ್ಷಣವೇ ಕೇಸ್ ದಾಖಲಾಗಲಿದ್ದು, ಅಪರಾಧ ಸಾಬೀತಾದಲ್ಲಿ ಗರಿಷ್ಠ 10 ಲಕ್ಷ ರೂಪಾಯಿ ದಂಡ ಹಾಗೂ 7 ವರ್ಷಗಳ ಕಾಲ ಕಾರಾಗೃಹ ವಾಸದ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕುರಿತು ಪೊಲೀಸ್ ಇಲಾಖೆ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಏಕರೂಪದ ಅನುಷ್ಠಾನಕ್ಕೆ ಸೂಚನೆ: ಇಂತಹ ಸೈಬರ್ ಅಪರಾಧಗಳು, ಬ್ಲಾಕ್‌ಮೇಲ್ ಮತ್ತು ರಿವೆಂಜ್ ಪೋರ್ನೋಗ್ರಫಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ತಕ್ಷಣವೇ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯಾದ್ಯಂತ ಏಕರೂಪದ ಅನುಷ್ಠಾನಕ್ಕಾಗಿ “ಸ್ಥಾಯಿ ಆದೇಶ 1061″ರ ಅಡಿಯಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿರುವುದಾಗಿ ಸಚಿವರು ವಿವರಿಸಿದ್ದಾರೆ.
ಮಾರ್ಗಸೂಚಿ-ಕಾನೂನು ಕ್ರಮ: ಒಪ್ಪಿಗೆಯ ಕುರಿತು ಕಾನೂನು ಸ್ಪಷ್ಟನೆ, ಚಿತ್ರೀಕರಣದ ಒಪ್ಪಿಗೆ ಎಂದರೆ ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ, ಸಂತ್ರಸ್ತರು ಆರಂಭದಲ್ಲಿ ಚಿತ್ರ ಅಥವಾ ವೀಡಿಯೊ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ ಸಹ, ಅದನ್ನು ಇತರರಿಗೆ ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ಇರದೇ ಇದ್ದ ಪಕ್ಷದಲ್ಲಿ ಅದನ್ನು ಪ್ರಚಾರಪಡಿಸುವುದನ್ನು ಬಿಎನ್‌ಎಸ್ ಕಾಯ್ದೆ ಪ್ರಕಾರ ಸಂಜ್ಞೇಯ ಅಪರಾಧ ಎಂದೇ ಪರಿಗಣಿಸಲಾಗುತ್ತದೆ.
ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77 ರನ್ವಯ ಮಹಿಳೆಯರ ಖಾಸಗಿ ಕ್ಷಣಗಳನ್ನು ಇಣುಕುವುದು, ಚಿತ್ರೀಕರಿಸುವುದು ಅಥವಾ ಪ್ರಸಾರ ಮಾಡಿದರೆ ಮೊದಲ ಅಪರಾಧಕ್ಕೆ 1 ರಿಂದ 3 ವರ್ಷ ಹಾಗೂ ಪುನರಾವರ್ತಿತ ಅಪರಾಧಕ್ಕೆ 3 ರಿಂದ 7 ವರ್ಷ ಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು.
ಐಟಿ ಕಾಯ್ದೆ, 2000ರ ಸೆಕ್ಷನ್ 66(ಇ) ಪ್ರಕಾರ ಅನುಮತಿ ಯಿಲ್ಲದೆ ವ್ಯಕ್ತಿಯ ಖಾಸಗಿ ಅಂಗಗಳ ಚಿತ್ರ ಸೆರೆಹಿಡಿ ಯುವುದು ಅಥವಾ ಪ್ರಸಾರ ಮಾಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಅಥವಾ 2 ಲಕ್ಷ ರೂವರೆಗೆ ದಂಡ. ಸೆಕ್ಷನ್ 67 ಮತ್ತು 67(ಎ) ಅಶ್ಲೀಲ ಮತ್ತು ಲೈಂಗಿಕ ವಿಷಯಗಳ ಬಗ್ಗೆ ಇಲೆಕ್ಟ್ರಾನಿಕ್ ರೂಪದಲ್ಲಿ ವಿಷಯಗಳನ್ನು ಹರಡಿದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 5 ಲಕ್ಷದಿಂದ 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.






















