ಮದ್ದೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿರುವ ಎರಡು ಪತ್ರಗಳಿಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೂ ಜೂನ್ 27ರಂದು ಭೈರಮಂಗಲದಲ್ಲಿ ಸಂಜೆವರೆಗೂ ಕಾಯುತ್ತೇನೆ. ಮುಖ್ಯಮಂತ್ರಿ ಬರಲು ಸಾಧ್ಯವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನಾದರೂ ಚರ್ಚೆಗೆ ಕಳುಹಿಸಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರಮಂಗಲಕ್ಕೆ ಜೂನ್ 27ರಂದು ಭೇಟಿ ನೀಡುವ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಕಾಂಗ್ರೆಸ್ ಸರ್ಕಾರ ಜನಾಭಿಪ್ರಾಯದ ವಿರುದ್ಧ ಏಕೆ ನಡೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು.
2007ರಲ್ಲಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಇದೇ ಟೌನ್‌ಶಿಪ್ ಯೋಜನೆ ಕುರಿತು ವಿಧಾನಸಭೆಯಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ದಾಖಲೆಗಳಿವೆ. ಆಗ ರೈತರ ವಿರೋಧದ ಹಿನ್ನೆಲೆಯಲ್ಲಿ ತಾವು ಯೋಜನೆಯನ್ನು ಕೈಬಿಟ್ಟಿದ್ದೆವು. ಈಗ ಅದೇ ಯೋಜನೆಯನ್ನು ಹೊಸ ರೂಪದಲ್ಲಿ ಜಾರಿಗೆ ತರಲು ಮುಂದಾಗಿದ್ದು, ಶೇ. 80ರಷ್ಟು ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಯೋಜನೆಗೆ ಬೆಂಬಲ ಸೃಷ್ಟಿಸಲು ಕಾಂಗ್ರೆಸ್ ಮುಖಂಡರನ್ನು ಕರೆತಂದು ರೈತರಿಗೆ ಹಣ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಜನವಿರೋಧಿ ಸರ್ಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಸರ್ಕಾರದ ಆಡಳಿತ ವೈಫಲ್ಯದಿಂದ ಜನರು ಬೇಸತ್ತಿದ್ದಾರೆ ಎಂದು ಟೀಕಿಸಿದರು.
ವಿಧಾನಸೌಧಕ್ಕೆ ಬಂದು ಚರ್ಚೆ ನಡೆಸಲಿ ಎಂಬ ಸಚಿವ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯತೀಂದ್ರ ಹೇಗೆ ಮಾತನಾಡುತ್ತಿದ್ದರು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಅವರಿಂದ ತಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.






















