SK Home Ad
Home ನಮ್ಮ ಜಿಲ್ಲೆ ವಿಜಯಪುರ ನಾಡಗೌಡರು ಸಂಪುಟದಲ್ಲಿರಬೇಕು ಎಂಬುದು ನನ್ನ ಆಶಯ: ಸಿಎಂ

ನಾಡಗೌಡರು ಸಂಪುಟದಲ್ಲಿರಬೇಕು ಎಂಬುದು ನನ್ನ ಆಶಯ: ಸಿಎಂ

0
100

ವಿಜಯಪುರ(ತಾಳಿಕೋಟೆ): ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಬೇಕು ಎಂಬುದು ತಮ್ಮ ವೈಯಕ್ತಿಕ ಆಶಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಮುದ್ದೇಬಿಹಾಳ ಕ್ಷೇತ್ರದಿಂದ ಬೆಂಗಳೂರಿಗೆ ತೆರಳಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಡಗೌಡರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದು, ಸಚಿವರಾಗಲು ಸಂಪೂರ್ಣ ಅರ್ಹರು ಎಂದು ಹೇಳಿದರು.

“ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ನಾಡಗೌಡರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ನಡೆದ ಬದಲಾವಣೆಗಳಿಂದ ಅವರಿಗೆ ಅವಕಾಶ ತಪ್ಪಿತು. ಈ ಬಾರಿ ಸಚಿವ ಸ್ಥಾನ ನೀಡುವಂತೆ ನೀವು ಮಾಡುತ್ತಿರುವ ಮನವಿಯನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಪ್ರಾಮಾಣಿಕವಾಗಿ ತರುತ್ತೇನೆ” ಎಂದು ಭರವಸೆ ನೀಡಿದರು.

ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿರುವ ನಾಡಗೌಡರ ಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಅವರ ಪಾತ್ರವನ್ನು ಪಕ್ಷ ಮರೆಯುವುದಿಲ್ಲ. ಎಂಟು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಆರು ಬಾರಿ ಗೆಲುವು ಸಾಧಿಸಿರುವ ಅವರು ಹಿರಿಯ ಹಾಗೂ ಅನುಭವಿ ಶಾಸಕರಾಗಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

“ಈ ವೇದಿಕೆಯಲ್ಲಿ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನಾಡಗೌಡರು ಸಚಿವರಾಗಲು ಅರ್ಹರು ಎಂಬ ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ. ಅವರಿಗೆ ಉತ್ತಮ ಅವಕಾಶ ದೊರಕುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, “ನೀವು ಬೆಂಗಳೂರಿಗೆ ಬರುವ ಅಗತ್ಯವೇ ಇರಲಿಲ್ಲ. ನಿಮ್ಮಂತಹ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದಲೇ ಕಾಂಗ್ರೆಸ್ ಪಕ್ಷ ಇಂದು ಈ ಮಟ್ಟಕ್ಕೆ ಬೆಳೆದಿದೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ” ಅಲ್ಲದೆ, ನಾಡಗೌಡರು ಸೌಮ್ಯ ಸ್ವಭಾವದ ನಾಯಕರು. ಅವರಂತೆ ಕಾರ್ಯಕರ್ತರೂ ಶಾಂತಿಯುತವಾಗಿ ತಮ್ಮ ಬೇಡಿಕೆಯನ್ನು ಮಂಡಿಸಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ವೈ.ಎಚ್. ವಿಜಯಕರ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಾಸಕ ಅಪ್ಪಾಜಿ ನಾಡಗೌಡರು ಒಂದೇ ಅವಧಿಯಲ್ಲಿ ರಾಜಕೀಯ ಪ್ರವೇಶಿಸಿದ್ದು, ಉತ್ತರ ಕರ್ನಾಟಕದ ಹಿರಿಯ ಶಾಸಕರಲ್ಲಿ ನಾಡಗೌಡರು ಪ್ರಮುಖರು. ಹಲವು ಬಾರಿ ಸಚಿವ ಸ್ಥಾನ ತಪ್ಪಿದ್ದರೂ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ದುಡಿದಿರುವ ಅವರಿಗೆ ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಬೇಕು ಎಂದು ಕಾರ್ಯಕರ್ತರ ಪರವಾಗಿ ಮನವಿ ಮಾಡಿದರು.