ಮಂಡ್ಯ: ಆರ್ಥಿಕ ಸಂಕಷ್ಟ ಹಾಗೂ ಸಾಲ ಬಾಧೆಯಿಂದ ಮನನೊಂದ ವ್ಯಕ್ತಿಯೊಬ್ಬ ಪತ್ನಿ ಹಾಗೂ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ನೆಹರು ನಗರದಲ್ಲಿ ನಡೆದಿದೆ.
ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಪ್ರಭಾಕರ್ (65) ಎಂಬಾತ ಪತ್ನಿ ಜ್ಯೋತಿ (55), ಮಗ ಸಂತೋಷ್ (30)ನನ್ನು ತಡರಾತ್ರಿ 3.30ರ ಸಮಯದಲ್ಲಿ ಕೊಲೆಗೈದು ತಾನೂ ಕೂಡ ಬಟ್ಟೆ ಅಂಗಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಪತ್ನಿ ಜ್ಯೋತಿಯನ್ನು ವೇಲ್‌ನಿಂದ ಉಸಿರುಗಟ್ಟಿಸಿ ಸಾಯಿಸಿದ್ದ ಪ್ರಭಾಕರ್, ಈ ವೇಳೆ ಬಂದ ಮಗ ಸಂತೋಷ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಂತೋಷ್ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ.
ಬೆಳಗಿನ ಜಾವ ಈ ಘಟನೆ ಜರುಗಿದ್ದರೂ ತಿಳಿಯದ ಸೊಸೆ ಬೆಳಿಗ್ಗೆ ತಿಂಡಿ ರೆಡಿ ಮಾಡಿ, ಅತ್ತೆಯನ್ನು ಎಬ್ಬಿಸಲು ರೂಂಗೆ ತೆರಳಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಡೆತ್‌ನೋಟ್‌ನಲ್ಲಿ ಫ್ರೀ ಬಸ್ ಬಗ್ಗೆ ದೂರು: ಸಾಲದ ಒತ್ತಡಕ್ಕೆ ಸಿಲುಕಿ ಪತ್ನಿ, ಮಗನನ್ನು ಹತ್ಯೆಗೈದಿರುವುದಾಗಿ ಪ್ರಭಾಕರ್ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ. ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಮನನೊಂದು, ಸರ್ಕಾರ ಫ್ರೀ ಬಸ್ ಬಿಟ್ಟಿರುವುದು ವ್ಯಾಪಾರ ಕಮ್ಮಿಯಾಗಿತ್ತೆಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಇದರಿಂದ ಸಾಲ ತೀರಿಸಲಾಗಿಲ್ಲ. ಖಾಸಗಿ ಫೈನಾನ್ಸ್‌ಗಳು ಸಾಲ ಕಟ್ಟಿಲ್ಲ ಅಂದರೆ ಮನೆ ಬಳಿ ಬರುತ್ತಾರೆ ಎಂದು ಕಿರುಕುಳದಿಂದ ಮನನೊಂದಿರುವುದಾಗಿ ತಿಳಿಸಿದ್ದಾರೆ.





















