SK Home Ad
Home ಸಿನಿ ಮಿಲ್ಸ್ ಡಾಲಿ ನಿರ್ಮಾಣದ ‘ಮದರ್ ಪ್ರಾಮಿಸ್’ ಟ್ರೈಲರ್‌ನಲ್ಲಿ ಭಾವನೆಗಳ ಜಾತ್ರೆ

ಡಾಲಿ ನಿರ್ಮಾಣದ ‘ಮದರ್ ಪ್ರಾಮಿಸ್’ ಟ್ರೈಲರ್‌ನಲ್ಲಿ ಭಾವನೆಗಳ ಜಾತ್ರೆ

0
66

ಡಾಲಿ ಧನಂಜಯ್ ಅಭಿನಯದ ‘ಮದರ್ ಪ್ರಾಮಿಸ್’ ಟ್ರೈಲರ್ ರಿಲೀಸ್: ಸ್ನೇಹ, ತಾಯಿ ಸೆಂಟಿಮೆಂಟ್, ಥ್ರಿಲ್ ಮಿಶ್ರಣದ ಯೂತ್‌ಫುಲ್ ಕಥೆಗೆ ಸಿನಿಪ್ರಿಯರ ಮೆಚ್ಚುಗೆ.

ಬೆಂಗಳೂರು: ನಟ ಡಾಲಿ ಧನಂಜಯ್ ನಿರ್ಮಾಣ ಹಾಗೂ ಅಭಿನಯದ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಜುಲೈ 10ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಈಗಾಗಲೇ ತನ್ನ ಹಾಡುಗಳ ಮೂಲಕ ಗಮನ ಸೆಳೆದಿದ್ದ ‘ಮದರ್ ಪ್ರಾಮಿಸ್’ ಸಿನಿಮಾ, ಇದೀಗ ಟ್ರೈಲರ್ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಸ್ನೇಹ, ತಾಯಿ-ಮಗನ ಭಾವನಾತ್ಮಕ ಸಂಬಂಧ, ಆ್ಯಕ್ಷನ್, ಥ್ರಿಲ್ಲರ್, ಡಾನ್ ಗ್ಯಾಂಗ್, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುವುದು ಕಂಡುಬಂದಿದೆ. ಹೀಗಾಗಿ ಸಿನಿಮಾ ಮನರಂಜನೆಯ ಜೊತೆಗೆ ಭಾವನಾತ್ಮಕ ಅಂಶಗಳನ್ನೂ ಹೊಂದಿರಲಿದೆ ಎಂಬ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ISSF ವಿಶ್ವ ಜೂನಿಯರ್ ಶೂಟಿಂಗ್: ಹುಬ್ಬಳ್ಳಿಯ ಐಶ್ವರ್ಯಾಗೆ ಬೆಳ್ಳಿ ಪದಕ

ವಿಶೇಷವೆಂದರೆ, ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಚಿತ್ರ ನಿರ್ಮಾಣದ ಹೊಣೆಗಾರಿಕೆಯನ್ನೂ ವಹಿಸಿಕೊಂಡಿದ್ದಾರೆ. ಧನಂಜಯ್ ಅವರ ಆಪ್ತ ಸ್ನೇಹಿತ ಪೂರ್ಣ ಮೈಸೂರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಮತ್ತೊಬ್ಬ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

‘ಡೇರ್ ಡೆವಿಲ್ ಮುಸ್ತಾಫ’ ಖ್ಯಾತಿಯ ನಿರ್ದೇಶಕ ಶಶಾಂಕ್ ಈ ಸಿನಿಮಾಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ನಾಗಭೂಷಣ್, ಹಿರಿಯ ನಟಿ ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ನಿರ್ವಹಣೆ ಹಿನ್ನೆಲೆ: ಇಂದು ಇಡೀ ದಿನ KEA ಹೆಲ್ಪ್‌ಲೈನ್ ಬಂದ್

ರಾಹುಲ್ ರಾಯ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ ನಿರ್ದೇಶನ ಹೊಂದಿರುವ ‘ಮದರ್ ಪ್ರಾಮಿಸ್’ ಸಿನಿಮಾ ಬಹುಕಾಲದ ಬಳಿಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಯೂತ್‌ಫುಲ್ ಹಾಗೂ ಭಾವನಾತ್ಮಕ ಕಥೆಯನ್ನು ತರುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸದ್ಯ ಸಿನಿಮಾದ ಟ್ರೇಲರ್‌ಬಿಡುಗಡೆ ಆಗಿದ್ದು ಜುಲೈ ೧೦ ಕ್ಕೆ ಬಿಡುಗಡೆ ಆಗುತ್ತೆ..ತುಂಬಾ ದಿನಗಳ ನಂತರ ಯೂಥ್‌ಫುಲ್‌ಸಿನಿಮಾವೊಂದು ಬಿಡುಗಡೆ ಆಗುತ್ತಿದೆ