SK Home Ad
Home ಅಂಕಣ ಅಂಕಣ ಬರಹ: `ಬರವೆಂದರೆ ಎಲ್ಲರಿಗೂ ಪ್ರೀತಿ’ಯಾಗದಿರಲಿ!

ಅಂಕಣ ಬರಹ: `ಬರವೆಂದರೆ ಎಲ್ಲರಿಗೂ ಪ್ರೀತಿ’ಯಾಗದಿರಲಿ!

0
75

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಇನ್ನಾರು ದಿನವಷ್ಟೇ… ವರ್ಷದ ಮುಂಗಾರಿನ ಪ್ರಮುಖ ತಿಂಗಳು ಮುಗಿದು ಮಾನ್ಸೂನ್ ಋತುವಿನ ಆರಂಭದ ಮೊದಲ ಮಾಸ ಕೊನೆಗೊಳ್ಳುತ್ತದೆ. ರಾಜ್ಯದ ಕೃಷಿಕ ಗರ ಬಡಿದು ಕುಳಿತಿದ್ದಾನೆ.

ಕೇವಲ ಕರ್ನಾಟಕವಷ್ಟೇ ಅಲ್ಲ… ಇಡೀ ದೇಶವನ್ನು ಈಗ ಆವರಿಸಿ ಭೋರ್ಗರೆಯಬೇಕಾಗಿದ್ದ ಮಳೆ, ತಾನು ಆಗಸದಿಂದ ಇಳಿಯಬೇಕಿದ್ದ ಈ ಕಾಲದಲ್ಲಿ ರಣಬಿಸಿಲು ರೌದ್ರಾವತಾವರನ್ನು ತಾಳಿದೆ!

ನೈಋತ್ಯ ಮಳೆ ಮುಂಗಾರು ಬಿರುಸಾಗಿ ಸುರಿಯಬೇಕಾದ ಸಮಯವಿದು. ಕರಾವಳಿಯಿಂದ ಕೋಲಾರದವರೆಗೆ ಮಳೆ ಇಲ್ಲ. ಕಾವೇರಿ, ತುಂಗಭದ್ರಾ, ಶರಾವತಿ, ಕೃಷ್ಣಾ, ಕಬಿನಿ, ಮಲಪ್ರಭಾ, ಕಾರಂಜಾವರೆಗಿನ ಎಲ್ಲ ಜಲಾಶಯಗಳು ತಳ ಕಾಣುತ್ತಿರುವ ಆತಂಕದ ಕ್ಷಣಗಳಿವು.

ತಜ್ಞರು ಹೇಳುವಂತೆ, ಸೂಪರ್ ಎಲ್‌ನಿನೋ ಪ್ರಸಕ್ತ ವರ್ಷ ಮಳೆ ಅಭಾವಕ್ಕೆ ಕಾರಣ. ಪರಿಣಾಮ, ಕರ್ನಾಟಕವಷ್ಟೇ ಅಲ್ಲ. ಈಗ ಇಡೀ ದೇಶದಲ್ಲಿ ಬರದ ಛಾಯೆ ಆವರಿಸಿದೆ. ಸೂಪರ್ ಎಲ್‌ನಿನೋ ಕಾರಣದಿಂದ ಭೀಕರ ಬರದ ಅಪಾಯ ಎದುರಾಗಿ ಜನ ತಲ್ಲಣಿಸುವಂತಾಗಿದೆ!!

ಜನ ಪ್ರಸಕ್ತ ಬದುಕಿನ ಮತ್ತು ಭವಿಷ್ಯತ್ತಿನ ಚಿಂತೆಯಲ್ಲಿರುವಾಗ ದೇಶದಲ್ಲಿ ರಾಜಕೀಯವೇ ಪ್ರಧಾನವಾಗಿಬಿಟ್ಟಿದೆ. ಇದು ನಿಜಕ್ಕೂ ಮಾನವೀಯ ದುರಂತ.

ಇಂದು ಯಾವ ಪಕ್ಷ ಮೆರೆಯುತ್ತಿದೆ? ಅದನ್ನು ಮತ್ತು ಇತರ ಪ್ರಾದೇಶಿಕ ಪಕ್ಷಗಳನ್ನು ಹೇಗೆ ಚಿವುಟಿ ಹಾಕಬಹುದು? ಯಾವ ಸಂಸದರು ಯಾವ ಫಲಾಪೇಕ್ಷೆಯೊಂದಿಗೆ ಎತ್ತ ಹೋದರು? ನಮ್ಮ ಸಾಮರ್ಥ್ಯ- ಬಲಗಳನ್ನು ಎಲ್ಲಿ ಪ್ರದರ್ಶಿಸಬೇಕು? ಪ್ರಬಲ ಪ್ರತಿಸ್ಪರ್ಧಿಗಳನ್ನು ಹಣಿಯುವುದು ಹೇಗೆ? ಎಂಬ (ಕು) ತಂತ್ರದಲ್ಲಿ ದೇಶದ ಬಲಾಢ್ಯ ರಾಜಕಾರಣಿಗಳು ಮುಳುಗಿದ್ದರೆ, ಅವರವರ ತೆರನಾಗಿ, ಅವರವರ ಭಕುತಿ, ಅಂಧಶ್ರದ್ಧೆ `ಸಮರ್ಥನೆ’ಯ ರೂಪದಲ್ಲಿ ಮಿಂಚುತ್ತಿವೆ.

ಬರದ ಸಂಕಷ್ಟದ ನಡುವೆ ನಮ್ಮ ಕರ್ನಾಟಕದಲ್ಲಿ ಆಗಿರುವುದನ್ನು ನೋಡಿ. ಹೊಸ ಸಿಎಂ ನೇತೃತ್ವದ ಸರ್ಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ. ಮಾಸಾಂತ್ಯದಲ್ಲಾದರೂ ಹವಾಮಾನ, ಕೃಷಿ, ಅಂತರ್ಜಲ ಕುಸಿತ ಪರಿಸ್ಥಿತಿ ಇವೇ ಮೊದಲಾದ ಸಮಸ್ಯೆಗಳಿಗೆ ಜವಾಬ್ದಾರಿ ಹೊರುವ ಮಂತ್ರಿ ಬರಬಹುದೇನೋ ಎನ್ನುವ ನಿರೀಕ್ಷೆಯಲ್ಲಿ ರಾಜ್ಯ ಕಾಯುತ್ತಿದ್ದರೆ, ಅಡ್ಡ ಮತದಾನ, ಆಣೆ ಪ್ರಮಾಣ, ಬಿಡದಿ ಟೌನ್‌ಶಿಪ್ ವಿವಾದ ಇತ್ಯಾದಿ ವಿವಾದಗಳು ಜನರ ಹಸಿವು ತಣಿಸುವ ಬಗ್ಗೆ ಗಮನವಿಲ್ಲದೇ ಕುಣಿಯುತ್ತಿವೆ. ಇವುಗಳು ಜನರ ಹಸಿವು ಮತ್ತು ಸಂಕಷ್ಟವನ್ನು ಅಪಹಾಸ್ಯ ಮಾಡುವಂತೆ ಕೇಂದ್ರೀಕೃತಗೊಂಡು ಅಟ್ಟಹಾಸ ಮಾಡುತ್ತಿವೆ. ಬರವಿರಲಿ, ಬಡತನ ರಾಚಲಿ ಇವುಗಳಿಗೆ ಬಂದಿರುವ ರೆಕ್ಕೆಪುಕ್ಕಗಳು ವಿಜೃಂಭಿಸುತ್ತಿವೆ !

ಹೊಸದಾಗಿ ಮಂತ್ರಿಗಳಾಗಬೇಕು ಎನ್ನುವವರು ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ. ಅವರಿಗೆ ಬರದ ಚಿಂತೆಯೂ ಇಲ್ಲ. ಬಾರದ ಅಧಿಕಾರವನ್ನು ಪಡೆಯುವುದು ಹೇಗೆ ಎನ್ನುವ ಏಕಂಶದ ಚಿಂತನೆಯಷ್ಟೇ ಅವರ ಪಾಡು.

ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಗೊಬ್ಬರಗಳು ಸಿಗುತ್ತಿಲ್ಲ. ಯಾವ ಬೆಳೆ ಹಾಕುವುದು; ಬೀಜ ಬಿತ್ತುವುದು ಎಂದು ಭೂಮಿಯ ಬದಲು ಆಕಾಶದತ್ತ ನೋಡುವುದೇ ಈ ರೈತನ ಹಣೇಬರಹ. ಇದರ ನಡುವೆ ಕಾವೇರಿ ನೀರಿಗಾಗಿ ತಮಿಳುನಾಡು ಎಂದಿನಂತೆ ತಗಾದೆ ತೆಗೆದಿದೆ. ಆಲಮಟ್ಟಿ ಪಕ್ಕದ ರೈತರಿಗೆ ನೀರಿದ್ದೂ ಇಲ್ಲದ ಬವಣೆ..

ಯಾರನ್ನು ಕೇಳುವುದು…? ರಾಜ್ಯದ ಕೃಷಿ ಇಲಾಖೆಗೊಬ್ಬ ಒಬ್ಬ ಮಂತ್ರಿ ಇಲ್ಲ. ಕಾರ್ಯಾಂಗದ ಸ್ತಂಭಗಳು ಸೂಪರ್ ಎಲ್‌ನಿನೋ ಅನಾವೃಷ್ಟಿಗೆ `ವಂದನೆ’ ಸಲ್ಲಿಸುತ್ತ ಹುಸಿ ನಗೆ ಬೀರುತ್ತಿವೆ !!

ನಿಜ. ಅನಾವೃಷ್ಟಿ ಮತ್ತು ಅತಿವೃಷ್ಟಿಗಳು ಕಿಸೆ ತುಂಬಿಸಿಕೊಳ್ಳುವವರಿಗೆ ಒಂದು ದೊಡ್ಡ ಅವಕಾಶ. ರೈತ, ಜನ ಬಸವಳಿದು ಸಾಯುವಾಗ, ಕಂಗೆಟ್ಟಿರುವಾಗ ಅಧಿಕಾರಸ್ಥರ ಮುಖದಲ್ಲಿ ಲವಲವಿಕೆ- ಸಂತಸ ಮೂಡುತ್ತವೆ ಎನ್ನುವುದು ಹಳೆಯ ಮಾತಾದರೂ, ಈಗಲೂ ಪ್ರಸ್ತುತವೇ.

ಹೌದು. ಇಡೀ ಜೂನ್ ತಿಂಗಳು ಮಳೆ ಇಲ್ಲದೇ ರಾಜ್ಯ- ದೇಶ ಕಂಗೆಟ್ಟಿರುವಾಗ ಈ ಬಗ್ಗೆ ಮತ್ತು ಈ ವರ್ಷದ ಕೃಷಿ, ಜನಜೀವನ, ಬದುಕಿನ ಬಗ್ಗೆ ಚಿಂತನೆಯೇ ಇಲ್ಲವಲ್ಲ…!?

ಕೇಂದ್ರ ಕೃಷಿ ಮಂತ್ರಿ ಶಿವರಾಜಸಿಂಗ್ ಚವ್ಹಾಣ್ ರಾಷ್ಟç ಮಟ್ಟದಲ್ಲಿ ಒಂದು ಸಭೆ ನಡೆಸಿದರು. ಭೀಕರ ಬರಗಾಲದ ಹೊಸ್ತಿಲಲ್ಲಿದ್ದೇವೆ. ನಾವು ಸಮರ್ಥವಾಗಿ ಬರ ಪರಿಸ್ಥಿತಿಯನ್ನು ಎದುರಿಸೋಣ. ಎಲ್ಲಿಯೂ ನೀರು, ಆಹಾರ ಇತ್ಯಾದಿಗಳ ಸಮಸ್ಯೆ ಉಂಟಾಗಬಾರದು ಎಂದು ಸೂಚಿಸಿದರು. ಸರಿ. ಆ್ಯಕ್ಷನ್ ಪ್ಲ್ಯಾನ್ ಏನು? ಮಾಮೂಲಿ ವಾರ್ಷಿಕ ಬಜೆಟ್, ವಾರ್ಷಿಕ ಕಾರ್ಯತಂತ್ರ, ಕ್ರಿಯಾಯೋಜನೆ ಅಷ್ಟೇ.

ಬರದ ದುಸ್ಥಿತಿಯನ್ನು ಕರ್ನಾಟಕವೊಂದೇ ಅಲ್ಲ. ಇಡೀ ದೇಶ ಹಿಂದೆಯೂ ಕಂಡು ಅನುಭವಿಸಿದೆ. ಆದರೂ ಅನಾವೃಷ್ಟಿಯನ್ನು ಸಮರ್ಥವಾಗಿ ಎದುರಿಸುವ ಯೋಜನೆಗಳನ್ನು ದೇಶ ಮಾಡದಿರುವುದು ದುರಂತವೇ ಸರಿ.

ಹಾಗೆ ನೋಡಿದರೆ ಕರ್ನಾಟಕವೇ ಈ ವಿಷಯದಲ್ಲಿ ಮಾದರಿ. ಬರವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಕರ್ನಾಟಕ ಎಂಬತ್ತರ ದಶಕದಲ್ಲಿ ತೋರಿಸಿಕೊಟ್ಟಿದೆ. 1983ರಿಂದ 1986ರವರೆಗೆ ಬರ ಇದ್ದಾಗ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ತಿಳಿಸಿದೆ. ಹೊರ ರಾಜ್ಯಗಳಿಂದ ನೀರನ್ನು ಕೂಡ ತರಿಸಿದ ಕೀರ್ತಿ ಆಗಿನ ಸರ್ಕಾರದ್ದು. ಪ್ರಥಮ ಬಾರಿಗೆ ಎಲ್ಲರಿಗೂ ಕೂಲಿ, ಉದ್ಯೋಗ ನೀಡುವ ಯೋಜನೆ ರೂಪಿಸಲಾಗಿತ್ತು ಆಗ. ಅಗತ್ಯವಿದೆಯೋ ಇಲ್ಲವೋ ಹೊಸ ಕೆರೆಗಳ ನಿರ್ಮಾಣ, ಹೊಸ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಭಾಗದಲ್ಲಿ ಗಿಡನೆಡುವ ಕಾರ್ಯಕ್ರಮ, ಅರಣ್ಯೀಕರಣಕ್ಕೆ ಒತ್ತು, ಹೊಸ ಬದುಗಳ ನಿರ್ಮಾಣ, ಕಾಲುವೆಗಳ ಸೃಜನೆ, ಚೆಕ್‌ಡ್ಯಾಮ್ ರೂಪಿಸುವಿಕೆ ಇತ್ಯಾದಿ ಯೋಜನೆಗಳನ್ನು ಆಗ ಹಮ್ಮಿಕೊಳ್ಳಲಾಗಿತ್ತು. ಮೇವು ಖರೀದಿಸಿ, ಗೋಶಾಲೆ ಸ್ಥಾಪಿಸಿ, ಕಸಾಯಿ ಖಾನೆಗಳಿಗೆ ಮಾರುತ್ತಿದ್ದ ಜಾನುವಾರುಗಳಿಗೆ ಉಸಿರನ್ನು ನೀಡಲಾಗಿತ್ತು !

ಬರ ಮತ್ತು ಅತಿವೃಷ್ಟಿ ಎರಡೂ ದುಡ್ಡು ಹೊಡೆಯುವ ದಂಧೆಯಾಗಿ ಪರಿವರ್ತನೆಯಾದದ್ದು ಇತ್ತೀಚಿನ ಇಪ್ಪತ್ತೈದು ವರ್ಷಗಳಲ್ಲಿ. ಪ್ರಭಾವಿ ಶಾಸಕರಿದ್ದರೆ ಬರ ಅಥವಾ ನೆರೆ ಇವೆರಡಕ್ಕೂ ಅದೇ ವರ್ಷದಲ್ಲಿ ತಮ್ಮ ಕ್ಷೇತ್ರಕ್ಕೆ ಹಣ ಮಂಜೂರಿ ಮಾಡಿಸಿಕೊಂಡ ಉದಾಹರಣೆ ರಾಜ್ಯದಲ್ಲೇ ಇವೆ. ಕೆಲವು ಇಲಾಖೆಗಳ ಅಧಿಕಾರಿಗಳಂತೂ ಬರ- ನೆರೆ ಈ ಎರಡೂ ಸಂದರ್ಭದಲ್ಲಿ ಖುಷಿ ಪಡುತ್ತಾರೆ.
ಈಗ ಮೊದಲು ಆಗಬೇಕಾದ ಕೆಲಸವೆಂದರೆ…

ಎಲ್ಲ ಮಾಫಿಯಾಗಳನ್ನು ಮಟ್ಟ ಹಾಕಬೇಕು. ಮುಖ್ಯವಾಗಿ ರೈತ ಕಂಗೆಟ್ಟು ಜಮೀನು ಮಾರದಂತೆ, ಬಡ್ಡಿ ಸಾಲ ತೆಗೆದುಕೊಳ್ಳದಂತೆ, ಆತನ ಕೈಗೆ ಪುರುಸೊತ್ತಿಲ್ಲದಂತೆ, ಹೊಟ್ಟೆ ತಣ್ಣಗಿರುವಂತೆ ನೋಡಿಕೊಳ್ಳಬೇಕು. ಕೆಲಸಕ್ಕಾಗಿ ಗುಳೆ ಹೋಗುವವರನ್ನು ನಿಯಂತ್ರಿಸಿ ಸ್ಥಳೀಯವಾಗಿ ಕೆಲಸ ದೊರಕುವಂತೆ ಮಾಡಬೇಕು. ಲಕ್ಷಾಂತರ, ಕೋಟ್ಯಂತರ ಸಾಲ ಮರುಪಾವತಿ ಮಾಡಬೇಕಾದ ಉದ್ಯಮಿಗಳ ಸಾಲವನ್ನೇ ಮನ್ನಾ ಮಾಡುತ್ತಿರುವಾಗ, ರೈತರ ಸಾಲವನ್ನು ಮೊದಲು ಮನ್ನಾ ಮಾಡಬೇಕು.

ವಿಮಾ ನೀತಿಯ ನಿಯಮಗಳನ್ನು ಬದಲಿಸಿ, ಬೆಳೆ ವಿಮೆ ಮತ್ತು ಹವಾಮಾನ ವಿಮೆ ಇವೆರಡಲ್ಲೂ ಈಗ ಅದಾನಿ, ಅಂಬಾನಿ, ಬಜಾಜ್, ಟಾಟಾ ಜೊತೆಗೆ ಇನ್ನೂ ಹತ್ತು ಹಲವು ರಾಷ್ಟ್ರೀಯ ಬಂಡವಾಳಶಾಹಿಗಳ ಲಾಭಕೋರತನದ್ದೇ ಭರಾಟೆ. ಅವರ ಅಟ್ಟಹಾಸ ಹತೋಟಿಗೆ ತರಬೇಕು. ಜನರಿಗೆ ಅರ್ಥವೂ ಆಗದ, ಪರಿಹಾರವೂ ದೊರೆಯದ ರೀತಿಯಲ್ಲಿ ಇರುವ ಬೆಳೆ ವಿಮಾ ಯೋಜನೆಗಳನ್ನು ಸರಿಪಡಿಸಬೇಕು.

ಇಷ್ಟಕ್ಕೂ ಕೊನೆಗೆ ಉಳಿಯುವ ಪ್ರಶ್ನೆ… ಜೂನ್ ಅಂತ್ಯವಾದರೂ ರಾಜ್ಯ ಮತ್ತು ದೇಶದಲ್ಲಿ ಮುಂಗಾರು ವೈಫಲ್ಯ ಮತ್ತು ಬರ ಎದುರಿಸಲು ಇನ್ನೂ ಯೋಚನೆ- ಯೋಜನೆ ನಡೆದಿಲ್ಲವಲ್ಲ ಎಂಬುದು.
ಈಗಲೇ ಗುಳೆ ಆರಂಭವಾಗಿದೆ. ರೈತರು ಮತ್ತು ಗ್ರಾಮೀಣ ಜನ ಇಂತಹ ಸಂಕಷ್ಟದಲ್ಲಿ ಅನಿವಾರ್ಯವಾಗಿ ಸಾಲಸೋಲ ಮಾಡುತ್ತಾರೆ. ಇವರಿಗೆ ಬಡ್ಡಿ ಮಾಫಿಯಾ ಅಮರಿಕೊಳ್ಳುತ್ತದೆ. ಲ್ಯಾಂಡ್ ಮಾಫಿಯಾ ಇವರ ಹಿಂದೆಯೇ ದಾಳಿ ಇಡುತ್ತದೆ. ಖರೀದಿ ಮಾಫಿಯಾ ಸಿದ್ಧವಾಗಿ ಕಾಯುತ್ತಿರುತ್ತದೆ. ಏಜೆಂಟರುಗಳು ಅಟ್ಟಹಾಸ ಶುರುವಾಗುತ್ತದೆ. ಶ್ರೀಮಂತರು, ಉದ್ಯಮಿಗಳು ಪರಿಸ್ಥಿತಿಯ ದುರ್ಲಾಭಕ್ಕಾಗಿ ಇಂತಹ ಸಂದರ್ಭವನ್ನು ಬಳಸಿಕೊಳ್ಳುತ್ತಾರೆ. ಬಡವನ ಜಮೀನು ಅಗ್ಗಕ್ಕೆ ವಿಕ್ರಿಯಾಗುತ್ತದೆ. ಆತನ ಬದುಕು ಬೀದಿಗೆ ಬೀಳುತ್ತದೆ. ಇವೆಲ್ಲ ಬರದ ಬೈ ಪ್ರಾಡಕ್ಟ್ಸ… ಇವೆಲ್ಲ ಇನ್ನು ಮುಂದೆ ಕಂಡು ಬರಬಹುದಾದ ಕಹಿ ವಾಸ್ತವಗಳು.

ಇನ್ನಾದರೂ ಎಚ್ಚೆತ್ತುಕೊಳ್ಳಿ… ಪರಿಸ್ಥಿತಿಯ ದುರ್ಲಾಭ ಪಡೆಯುವವರನ್ನು ನಿಯಂತ್ರಿಸಿ… ಬರ ಎಂದರೆ ಎಲ್ಲರಿಗೂ ಪ್ರೀತಿ ಎನ್ನುವ ಮಾತನ್ನು ಸುಳ್ಳಾಗಿಸಿ… ರಾಜಕೀಯ ಕೆಸರೆರಚಾಟ ಬದಿಗಿಟ್ಟು ಬರವನ್ನು ಸಹನೀಯವಾಗಿಸಲೇಬೇಕು ಎಂಬ ಒಂದೇ ಸಾಲಿನ ನೈತಿಕ ಕಾನೂನನ್ನು ಪಾಲಿಸಿ… ಇವುಗಳೇ ಪ್ರಸಕ್ತ ಭೀಕರ ಬರಗಾಲದ ಜನಾಶಯ !