ಧಾರವಾಡ ಜಿಲ್ಲೆಯ ಉಪ್ಪಿನಬೆಟಗೇರಿ ಗ್ರಾಮದಲ್ಲಿರುವ ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ನೈಸರ್ಗಿಕ ‘ಸಸಿ ಡೋಲಿ’ ಮೊಹರಂ ಹಬ್ಬದ ವಿಶೇಷ ಆಕರ್ಷಣೆಯಾಗಿದೆ. ಹತ್ತಿಯ ಅರಳಿಯಲ್ಲಿ ಅಳವಿಯ ಬೀಜಗಳಿಂದ ಬೆಳೆಯುವ ಈ ಡೋಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರನ್ನು ಸೆಳೆಯುತ್ತಿದೆ.
ವರದಿ: ಸಿ.ವೈ. ಲಗಮಣ್ಣವರ
ಧಾರವಾಡ: ಮೊಹರಂ ಹಬ್ಬದ ಸಂದರ್ಭದಲ್ಲಿ ಕೈ ದೇವರು, ಡೋಲಿ ದೇವರನ್ನು ನೋಡುವುದು ಸಾಮಾನ್ಯ. ಆದರೆ ಸಂಪೂರ್ಣ ನೈಸರ್ಗಿಕವಾಗಿ ಸಸಿಗಳಿಂದ ರೂಪುಗೊಳ್ಳುವ ‘ಸಸಿ ಡೋಲಿ’ಯನ್ನು ನೋಡುವುದು ಅಪರೂಪ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿರುವ ಈ ವಿಶಿಷ್ಟ ಸಸಿ ಡೋಲಿ ರಾಜ್ಯದಲ್ಲಿಯೇ ಅಪರೂಪದ ಸಂಪ್ರದಾಯವಾಗಿ ಪ್ರಸಿದ್ಧಿ ಪಡೆದಿದೆ.
ಗ್ರಾಮದ ಹಳೇ ಬಸ್ ನಿಲ್ದಾಣದ ಸಮೀಪದ ಜಾಲೇಗಾರ ಓಣಿಯಲ್ಲಿರುವ ‘ಸಸಿ ಮಸೀದಿ’ಯಲ್ಲಿ ಪ್ರತಿವರ್ಷ ಮೊಹರಂ ಸಂದರ್ಭದಲ್ಲಿ ಈ ನೈಸರ್ಗಿಕ ಸಸಿ ಡೋಲಿಯನ್ನು ನಿರ್ಮಿಸಲಾಗುತ್ತದೆ. ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಈ ಸಂಪ್ರದಾಯ ಇಂದು ಕೂಡ ಅಚ್ಚುಕಟ್ಟಾಗಿ ಮುಂದುವರಿದಿದೆ.
ಇದನ್ನೂ ಓದಿ: 3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ
ಹತ್ತಿಯ ಅರಳಿಯಲ್ಲಿ ಮೊಳಕೆಯೊಡೆಯುವ ಅಳವಿಯ ಬೀಜಗಳಿಂದ ಈ ಡೋಲಿ ಸಂಪೂರ್ಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಮೊಹರಂ ತಿಂಗಳ ಚಂದ್ರೋದಯದ ಮೂರನೇ ದಿನದಿಂದ ಡೋಲಿ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಬಿದಿರಿನ ಚೌಕಟ್ಟಿನ ಮೇಲೆ ಹಂತ ಹಂತವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಡೋಲಿಯನ್ನು ಸಿದ್ಧಪಡಿಸಲಾಗುತ್ತದೆ.
ಐದನೇ ದಿನ ಶುದ್ಧ ಹತ್ತಿಯ ಅರಳಿಯನ್ನು ಅಳವಡಿಸಿ ಡೋಲಿಯನ್ನು ಸಿದ್ಧಪಡಿಸಿದ ಬಳಿಕ ಮಧ್ಯರಾತ್ರಿ ಊರಿನ ತುಪ್ಪರಿ ಹಳ್ಳದಲ್ಲಿ ಸಂಪೂರ್ಣ ತೋಯಿಸಲಾಗುತ್ತದೆ. ನಂತರ ಮಸೀದಿಗೆ ತಂದು ಬೆಳಗಿನ ಜಾವ ಅಳವಿಯ ಬೀಜಗಳನ್ನು ಬಿತ್ತಲಾಗುತ್ತದೆ. ಮೂರು ದಿನಗಳ ಕಾಲ ಡೋಲಿಗೆ ಯಾರ ನೆರಳೂ ಬೀಳದಂತೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಆರನೇ ಮತ್ತು ಏಳನೇ ದಿನ ನೀರನ್ನು ಸಿಂಪಡಿಸಲಾಗುತ್ತದೆ. ಒಂಬತ್ತನೇ ದಿನ ಹಸಿರಿನಿಂದ ಕಂಗೊಳಿಸುವ ಸಸಿ ಡೋಲಿಯನ್ನು ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ.
ಇದನ್ನೂ ಓದಿ: ಕನ್ನಡ ಪಠ್ಯಪುಸ್ತಕ ವಿವಾದ: ‘ಕೃಷ್ಣ’ ಹೆಸರಿನ ಬಗ್ಗೆ NCERT ಸ್ಪಷ್ಟನೆ
ಮೊಹರಂ ಹಬ್ಬದ ಕೊನೆಯ ದಿನ ಸಸಿ ಡೋಲಿಯು ಗ್ರಾಮದ ಇತರೆ ಡೋಲಿಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತದೆ.
ಸುಮಾರು 15ನೇ ಶತಮಾನದಲ್ಲಿ ವಿಜಯಪುರದಿಂದ ವಲಸೆ ಬಂದ ಅನ್ಸಾರಿಸಾಹೇಬ ಬಿಜಾಪೂರ ಅವರ ಪೂರ್ವಜರು ಈ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸೀರಹ್ಮದ ಮಾಳಗಿಮನಿ ತಿಳಿಸಿದ್ದಾರೆ.
ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಅಧ್ಯಾಯ: ನಕಲಿ ಪ್ರತಿಗಳ ಬಗ್ಗೆ NCERT ಎಚ್ಚರಿಕೆ!
ಇದೇ ವೇಳೆ, ಸಸಿ ಡೋಲಿಯಲ್ಲಿ ಬೆಳೆಯುವ ಸಸಿಗಳ ಬೆಳವಣಿಗೆಯ ಆಧಾರದ ಮೇಲೆ ಆ ವರ್ಷದ ಮಳೆ-ಬೆಳೆ ಸ್ಥಿತಿಯನ್ನು ಅಂದಾಜಿಸಲಾಗುತ್ತದೆ ಎಂಬ ನಂಬಿಕೆಯೂ ಇಲ್ಲಿನ ಭಕ್ತರಲ್ಲಿ ಅಚಲವಾಗಿದೆ. ಸಸಿ ಸಮೃದ್ಧವಾಗಿ ಬೆಳೆದರೆ ಉತ್ತಮ ಮಳೆ ಮತ್ತು ಸಮೃದ್ಧ ಬೆಳೆ ಸಿಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಬೇರೂರಿದೆ.




















