Home Advertisement
Home ಅಂಕಣ ಅಂಕಣ ಬರಹ: ಜೆನ್-ಜಿ ಸುನಾಮಿ; ದರ್ಪ ರಾಜಕಾರಣ ಫಿನಿಷ್‌!

ಅಂಕಣ ಬರಹ: ಜೆನ್-ಜಿ ಸುನಾಮಿ; ದರ್ಪ ರಾಜಕಾರಣ ಫಿನಿಷ್‌!

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಜೆನ್-ಜಿ-ಯುವ ಜನತೆ ಜಾಗೃತರಾಗಿದ್ದಾರೆ. ಮೊನ್ನೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಈ ಶತಮಾನದ ನವ ಯುವಕರು ತಮ್ಮ ಸಾಮರ್ಥ್ಯ ಮತ್ತು ವಿಚಾರಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ದೇಶದ ಭ್ರಷ್ಟ, ದಬ್ಬಾಳಿಕೆಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಬದಲಿಸುವ ಶಕ್ತಿ ತಮ್ಮಲ್ಲಿದೆ ಎಂಬುದನ್ನು ಈ ಯುವಕರು ತೋರಿಸಿದ್ದಾರೆ. ಹಾಗೆಯೇ ಜೆನ್-ಜಿ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ಬೇಕು ಬೇಡಗಳಿಗೆ ಕಿವಿಗೊಡದಿದ್ದರೆ ಬಿಡೆವು ಎಂದು ಸಾರಿದ್ದಾರೆ. ನಿರ್ಲಕ್ಷಿಸಿದರೆ ತಮ್ಮ ಶಕ್ತಿ ಏನೆಂಬುದನ್ನು ಮತಗಳ ಮೂಲಕ ಸಾರ್ವಜನಿಕವಾಗಿ ಹೇಳಬೇಕಾಗುತ್ತದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಿದ್ದಾರೆ.

ತಮಿಳುನಾಡು ಚುನಾವಣೆ ‘ತಮಿಳು ವೆಟ್ರಿಗ ಕಳಗಂ’ನ (ಟಿವಿಕೆ) ನಟ ವಿಜಯ ಪಕ್ಷ ಗೆದ್ದಿರುವುದೇ ಈ ಕಾರಣಕ್ಕೆ. ವಿಜಯ್ ಟಿಕೆಟ್ ನೀಡಿದ್ದು ಯುವಕರಿಗೆ. ಬಹುತೇಕ ಎಲ್ಲ ನಲವತ್ತೈದರ ವಯೋಮಿತಿಯ ಒಳಗಿನವರು. ಇವರೆಲ್ಲ ತಮ್ಮ ಬೆಂಬಲಿಗರು ಎಂದಲ್ಲ. ಸಾರ್ವಜನಿಕರಿಗೆ, ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವವರು ಮತ್ತು ಪ್ರಜ್ಞಾವಂತರು ಎನ್ನುವ ಕಾರಣಕ್ಕೆ ವಿಜಯ್ ಇಂಥವರಿಗೆ ಟಿಕೆಟ್ ಕೊಟ್ಟರು. ಜನಪ್ರತಿನಿಧಿಯಾಗುವವರು ಸಚ್ಚಾರಿತ್ರ್ಯವಂತರು, ಜನರಿಗೆ ಸ್ಪಂದಿಸುವವರಾದರೆ ಜನ ಗೆಲ್ಲಿಸುತ್ತಾರೆ ಎಂಬುದು ಇದರಿಂದ ಸಾಬೀತಾಯಿತು.

ತಮಿಳುನಾಡಿನ ವಂಶಪಾರಂಪಯ್ಯ ರಾಜಕೀಯ ಮತ್ತು ಮೂವತ್ತು ನಲವತ್ತು ವರ್ಷಗಳಿಂದ ಅಧಿಕಾರ ಹಿಡಿದುಕೊಂಡಿರುವ ಅಥವಾ ಅದರ ಸುತ್ತ ಗಿರಕಿ ಹೊಡೆಯುವ ಮಂದಿಯಿಂದ ಜನ ಬೇಸತ್ತಿದ್ದರು. ಇದಕ್ಕೆ ಈಗ ಪರಿಹಾರವಾಗಿ ವಿಜಯ್ ಯುವ ತಂಡ ಕಟ್ಟಿದ್ದರು. ಅದೀಗ ಕ್ಲಿಕ್ ಆಯಿತು. ಡಿಎಂಕೆ, ಎಡಿಎಂಕೆ ಈ ಹಳಸಲು ಮುಖಗಳಿಗೆ ಮತದಾರರು “ಮಂಗಳಾರತಿ” ಎತ್ತಿ, ಯುವ ಸಮೂಹಕ್ಕೆ ತಿಲಕ ಇಟ್ಟರು!

ವಿಜಯ್ ಸ್ಟಾರ್ ಆಗಿ ಚುನಾವಣೆ ಗೆಲ್ಲಲಿಲ್ಲ. ಮತದಾರರು ಈ ಕಾರಣಕ್ಕಾಗಿಯೂ ಗೆಲ್ಲಿಸಲಿಲ್ಲ. ಎರಡು ವರ್ಷಗಳಿಂದ ವಿಜಯ್ ನಡೆಸಿರುವ ಕಾರ್ಯ, ಯುವಕರ ಮನಸ್ಥಿತಿ ಮತ್ತು ಅವರಲ್ಲಿನ ಅಂತಃಶಕ್ತಿಯನ್ನು ಜಾಗೃತಿಗೊಳಿಸಿ ಈಗ ಜನಬೆಂಬಲ ಗಳಿಸಿದ್ದಾರೆ. ಪರೋಕ್ಷವಾಗಿ ಯುವಕರೇ ದೇಶದ ಮುಂದಿನ ರಾಜಕಾರಣವನ್ನು ಕೈಗೆತ್ತಿಕೊಳ್ಳಿ ಎಂದು ಸಂದೇಶವನ್ನು ವಿಜಯ್ ಸಾರಿದಂತಿದೆ.

ಸ್ಟಾರ್ ನಟರೆಂಬ ಕಾರಣಕ್ಕೆ ವಿಜಯ್ ಗೆಲ್ಲಲಿಲ್ಲ ಎನ್ನುವುದಕ್ಕೆ ಒಂದು ಬಲವಾದ ಉದಾಹರಣೆ ನಮ್ಮೆದುರಿದೆ. ವಿಜಯ್‌ಗಿಂತ ಅತೀ ಹೆಚ್ಚು ಜನಪ್ರಿಯತೆ ಹಾಗೂ ದೇಶಾದ್ಯಂತ ಸಾಕಷ್ಟು ಬೆಂಬಲ ಹೊಂದಿದ್ದ ಕಮಲಹಾಸನ್ ರಾಜಕಾರಣದಲ್ಲಿ ಸೋತರು. ಜನ ಬೆಳೆಸಲಿಲ್ಲ. ರಜನಿಕಾಂತ್ ಯತ್ನಿಸಿದರು. ಆದರೆ ಆಗಲಿಲ್ಲ!!

ವಿಜಯ್‌ಗೆ ಏಕೆ ಸಾಧ್ಯವಾಯಿತೆಂದರೆ ಯುವ ಶಕ್ತಿಯ ಕೈಗೆ ಕೆಲಸ ಕೊಡುವ ಭರವಸೆ ನೀಡಿದ್ದು, ಯುವ ಜನತೆಯೇ‌ ನಮ್ಮ ಭವಿಷ್ಯ ಎಂಬುದನ್ನು ಎರಡು ವರ್ಷಗಳಿಂದ ಸಾರಿ ಹೇಳಿದ್ದು ಒಂದು ಭಾಗವಾಯಿತು. ಇದಕ್ಕಿಂತ ಮುಖ್ಯವಾಗಿ ತಾವು ಹೋದಲ್ಲೆಲ್ಲ ಈ ಮಾತು ಹೇಳುತ್ತಿರುವುದರಲ್ಲಿ ಕೇವಲ ಬೂಟಾಟಿಕೆಯ ಅಥವಾ ಸಿನಿಮೀಯ ನಟನೆಯ ಅಂಶಗಳಿಲ್ಲ ಎನ್ನುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜೆನ್-ಜಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಜಯ್ ಗೆದ್ದಿದ್ದರು.

ಚುನಾವಣಾ ಪೂರ್ವದ ಈ ಎರಡು ವರ್ಷಗಳ ಕೆಲಸ ಮತ್ತು ಪ್ರಚಾರದಲ್ಲಿ ಅವರನ್ನು ಯುವ ಸಮೂಹ ಮತ್ತು ಈ ಜೆನ್-ಜಿ ಪಾಲಕರು ನಂಬಿದ್ದೇ ವಿಜಯ್ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಏರುವಂತಾಗಲು ಕಾರಣ.

ಎಂಜಿಆರ್ (ಎಂ.ಜಿ.ರಾಮಚಂದ್ರನ್) ಕೂಡ ಇದೇ ರೀತಿ ಜನಪ್ರಿಯ ನಟರಾಗಿ ಮನಸ್ಸುಗಳನ್ನು ಗೆದ್ದು ತಮಿಳುನಾಡಿನ ಹೊಸ ರಾಜಕೀಯ ತಾರೆಯಾಗಿ ಉದಯಿಸಿದ್ದರು. ಅವರು ಅಧಿಕಾರಕ್ಕೇರಿದ ನಂತರ ತಮಿಳಿಗರನ್ನು ನಿರಾಸೆ ಮಾಡಲಿಲ್ಲ. ಬದಲಾಗಿ ಜನಪರ ಆಡಳಿತಕ್ಕೆ ದೇಶದಲ್ಲಿಯೇ ಸೈ ಎನಿಸಿಕೊಂಡರು. ಈಗ ವಿಜಯ್ ಎದಿರೂ ಇಂಥದ್ದೇ ಸವಾಲಿದೆ. ಚುನಾವಣೆಗೆ ಮುನ್ನ ಗೆದ್ದ ಜೆನ್-ಜಿ ಮನಸ್ಸುಗಳ ನಿರೀಕ್ಷೆಯನ್ನು ಅವರು ಈಗ ಹುಸಿಗೊಳಿಸಿದಂತೆ ನೋಡಿಕೊಳ್ಳುವುದು ಪ್ರಸಕ್ತ ತಮಿಳುನಾಡಿನ ಸನ್ನಿವೇಶದಲ್ಲಿ ಹೂ ಎತ್ತಿದಷ್ಟು ಸುಲಭವಂತೂ ಅಲ್ಲ!

ಪಶ್ಚಿಮ ಬಂಗಾಳದಲ್ಲೂ ಅಷ್ಟೇ, ಮಮತಾ ಬ್ಯಾನರ್ಜಿ ಅಹಂಕಾರ, ಸೊಕ್ಕು ಮತ್ತು ಅವರ ಹಿಂಬಾಲಕರ ಗೂಂಡಾಗಿರಿಯಿಂದ ಜನ ಬೇಸತ್ತಿದ್ದರು. ಹಾಗಾಗಿ ಅವರನ್ನು ಬದಲಿಸಲೇಬೇಕು ಎನ್ನುವ ತೀರ್ಮಾನವನ್ನು ಮೂರು ಕೋಟಿಯಷ್ಟಿರುವ ಯುವ ಮತದಾರರು ಮಾಡಿದ್ದರು. ಅಧಿಕಾರದ ಹದಿನೈದು ವರ್ಷದಲ್ಲಿ ನಿರುದ್ಯೋಗ ಯುವ ಜನರ ಧ್ವನಿಯನ್ನು ಮಮತಾ ಕೇಳಲಿಲ್ಲ.

ಬದಲಾಗಿ ಅವರನ್ನು ಪಶ್ಚಿಮ ಬಂಗಾಳ ಹಾಗೂ ತನ್ನ ವಿರೋಧಿ ಎಂದು ಬಿಂಬಿಸತೊಡಗಿದ್ದರು. ಮೊಕದ್ದಮೆಗಳನ್ನು ಹೇರಿದ್ದರು. ಹಾಗಾಗಿ ಯುವ ಸಮೂಹದ ಬಲ ಹಾಗೂ ಒಲವು ಎರಡನ್ನೂ ಮಮತಾ ಕಳೆದುಕೊಂಡರು. ಈಗ ಬಿಜೆಪಿಯಿಂದ ಆಯ್ಕೆಯಾದ ನಲವತ್ತೈದಕ್ಕೂ ಹೆಚ್ಚು ಶಾಸಕರು ಯುವಕರೇ ಎಂಬುದು, ಜೆನ್-ಜಿ ಯುವ ಸಮೂಹದತ್ತ ಒಲವು ಹೊಂದಿದ್ದಾರೆ; ದೇಶದಲ್ಲಿ ಬದಲಾವಣೆ ಬಯಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ.

ಕೇರಳಂನ ಎಲ್‌ಡಿಎಫ್ ಸರ್ಕಾರ ಯುವಕರಿಗೆ ಟಿಕೆಟ್ ನೀಡಲಿಲ್ಲ. ಬದಲು ಆರವತ್ತು- ಎಪ್ಪತ್ತು ವರ್ಷದವರನ್ನೇ ಕಮ್ಯೂನಿಸ್ಟ್ ಚಿಂತನೆಯ ಹೆಸರಿನಲ್ಲಿ ಕಣಕ್ಕಿಳಿಸಿತು. ಸಿದ್ಧಾಂತಕ್ಕೆ ಜನ ಮೆಚ್ಚಬೇಕು ಎನ್ನುವ ಧೋರಣೆ ಇದರ ಹಿಂದೆ ಸ್ಪಷ್ಟವಾಗಿತ್ತು. ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ತತ್ವ, ಸಿದ್ಧಾಂತ- ಬೊಧನೆಗಳು ಯಾರಿಗೆ ಬೇಕಾಗಿದೆ? ಹಸಿದ ಹೊಟ್ಟೆಗೆ ಇವು ಹೇಗೆ ತಾನೇ ರುಚಿಸಲು ಸಾಧ್ಯ?

ಕಾಂಗ್ರೆಸ್‌ನಿಂದ ಕೇರಳಂನಲ್ಲಿ ಈ ಸಾರೆ ಗೆದ್ದವರಲ್ಲಿ ಬಹುತೇಕ ಯುವ ಹಾಗೂ ಮಧ್ಯಮ ವಯಸ್ಸಿನವರು. ರಾಹುಲ್ ಪಡೆ ಈ ಮಟ್ಟಿಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಸ್ಪಂದಿಸಿದೆ.

ಗ್ಯಾರಂಟಿಗಳು, ಯುವನಿಧಿ, ಉಚಿತ ಬಸ್, ಮಾಸಾಷನ, ಫ್ರೀಬಿಗಳೆಲ್ಲ ನಂತರದ ವಿಷಯಗಳು ಮತ್ತು ಯೋಜನೆಗಳು. ವಿಶ್ವಾಸಾರ್ಹ ವ್ಯಕ್ತಿಗಳು ಮತ್ತು ರಾಜಕಾರಣಕ್ಕೆ ಹೊಸ ಮುಖಗಳನ್ನು ಪರಿಚಿಸಿದ್ದರಿಂದ ಕೇರಳಂನಲ್ಲಿ ಕಾಂಗ್ರೆಸ್ (ಯುಡಿಎಫ್‌) ಗೆದ್ದು, ಕಮ್ಯೂನಿಸ್ಟ್ ಆಡಳಿತಕ್ಕೆ ದೇಶದಲ್ಲಿ ಕೊನೇ ಮೊಳೆ ಹೊಡೆಯಿತು.

ಜೆನ್-ಜಿ ಕಳೆದ ಎರಡು ವರ್ಷಗಳಿಂದಂತೂ ತುಂಬ ಜಾಗೃತಗೊಂಡಿದ್ದಾರೆ. ನೇಪಾಳದಲ್ಲಿ ತಮ್ಮದೇ ಆದ ಸರ್ಕಾರವನ್ನು ಗೆಲ್ಲಿಸಿಕೊಂಡು ಬರುವಷ್ಟು ಪ್ರಬುದ್ಧರಾಗಿದ್ದಾರೆ. ಅದೇ ಟ್ರೆಂಡ್ ಈಗ ಭಾರತದಲ್ಲೂ ನಡೆದಿದೆ.

ಜೆನ್ ಜಿ ಇಪ್ಪತ್ತೊಂದನೇ ಶತಮಾನಕ್ಕೆ ಸೇರಿದ್ದು. 2000-2001ರಲ್ಲಿ ಜನಿಸಿದವರು ಈಗ ಮತದಾರರು. ಇವರಲ್ಲದೇ ಒಟ್ಟು ದೇಶದಲ್ಲಿ ಕನಿಷ್ಟ 40 ಕೋಟಿಗೂ ಅಧಿಕ ಮಂದಿ ನಲವತ್ತೈದು ವಯಸ್ಸಿನ ಮತದಾರರಿದ್ದಾರೆ ಎನ್ನುವುದನ್ನು ಚುನಾವಣಾ ಆಯೋಗವೇ ತಿಳಿಸಿದೆ.

ಇವರೇ ಈಗ ಪ್ರಬುದ್ಧ ಮತ್ತು ಜಾಗೃತ ಮತದಾರರು. ಉತ್ತಮ ಶಿಕ್ಷಣ, ತಂತ್ರಜ್ಞಾನ ಪಡೆದ, ಚಿಂತಿಸುವ ಮತ್ತು ಚಿಂತನೆ ನಡೆಸುವ ಜನ. ಇವರನ್ನು ಹತ್ತಿಕ್ಕುವ ಪ್ರಯತ್ನಗಳು ಇನ್ನು ಮುಂದೆ ನಡೆಯಲಾರವು. ಬಿಹಾರ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಮಣಿಪುರ, ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳೆಲ್ಲ ಜೆನ್ ಜಿ ಹೋರಾಟದ ಭೀತಿಯಲ್ಲಿವೆ.

ಕಿಸಾನ್ ಹೋರಾಟದಿಂದ ತತ್ತರಿಸಿದ್ದ ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ರಾಜ್ಯ ಸರ್ಕಾರಗಳು ಹತ್ತಿಕ್ಕಲು ಹೋಗಿ ಅಧಿಕಾರ ಕಳೆದುಕೊಳ್ಳುವ ಅಂಚಿಗೆ ಬಂದವು. ವರ್ಷಕ್ಕೆ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡುವ ಕೇಂದ್ರ ಸರ್ಕಾರ, ಹತ್ತು ವರ್ಷದ ನಂತರವೂ ಎರಡು ಕೋಟಿ ಉದ್ಯೋಗಗಳನ್ನು ನೀಡಲಿಲ್ಲ. ಹಾಗೆಯೇ ಅಧಿಕಾರಕ್ಕೆ ಬಂದ ತಕ್ಷಣ ಖಾಲಿ ಇರುವ ಎರಡು ಲಕ್ಷ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದ ಕರ್ನಾಟಕ ಸರ್ಕಾರ ಈಗ ಒಂದಿಲ್ಲೊಂದು ನೆಪ ಹೇಳಿ ಯುವ ಸಮೂಹದ ಸಹನೆಯನ್ನು ಪರೀಕ್ಷಿಸುತ್ತಿದೆ.3

ಧಾರವಾಡ, ಶಿವಮೊಗ್ಗ, ದಾವಣಗೆರೆ, ಕಲಬುರ್ಗಿ, ಮಂಗಳೂರು ಇತ್ಯಾದಿ ಕಡೆ ಸಹಸ್ರಾರು ನಿರುದ್ಯೋಗಿ ಯುವಕರು ನೇಮಕಾತಿ ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ ನೇರ ಹೋರಾಟಕ್ಕೆ ಇಳಿದರು. ಈಗ ಸರ್ಕಾರ ಇಂತಹ ಯುವ ಹೋರಾಟಗಾರರ ಮೇಲೆ ಪೊಲೀಸರನ್ನು ಬಳಸಿ ಮೊಕದ್ದಮೆಗಳನ್ನು ಹೂಡುತ್ತಿದೆ. ಧಾರವಾಡದಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಯುವಕನ ಮೇಲೆ ಐವತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.

ಈತನನ್ನು ಜೈಲಿಗೂ ಅಟ್ಟಲಾಗಿತ್ತು. ವಿದ್ಯಾರ್ಥಿಗಳಿಗೆ ಎಲ್ಲಿಯೂ ಕೆಲಸ ಸಿಗದಂತೆ ನೋಡಿಕೊಳ್ಳುವ, ಪ್ರಮಾಣ ಪತ್ರಗಳನ್ನು ತಡೆಹಿಡಿಯುವ ಮತ್ತು ಕ್ರಿಮಿನಲ್ ಕೇಸ್ ಹಾಕುವ ಹುನ್ನಾರ ನಡೆಯುತ್ತಿದೆ.

ಅಂದರೆ, ಜೆನ್ ಜಿ ಧ್ವನಿ ಹತ್ತಿಕ್ಕಿದರೆ ಮತ್ತಷ್ಟು ಪುಟಿದೇಳುತ್ತಾರೆ ಎನ್ನುವುದು ಸರ್ಕಾರಕ್ಕೆ ಇನ್ನೂ ಸ್ಪಷ್ಟವಾದಂತಿಲ್ಲ. ಶಿವಮೊಗ್ಗ, ಧಾರವಾಡದಲ್ಲೆಲ್ಲ ಹೋರಾಟದಲ್ಲಿ ದಾವಣಗೆರೆ, ತೊಡಗಿಸಿಕೊಂಡ, ಕೆಲಸ ಕೊಡಿ ಎಂದು ಕೇಳಿದ ಮಕ್ಕಳನ್ನು ಹೆಕ್ಕಿ ಹೆಕ್ಕಿ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಗಾಂಜಾ ಕೇಸು, ಮದ್ಯಪಾನ ಮಾಡಿ ವಾಹನ ಓಡಿಸುವ ಕೇಸು ಹಾಕುವ, ಎಲ್ಲಿಯೋ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಹೋರಾಟ ಮಾಡಿದ ಯುವಕರ ಮನೆಯಲ್ಲಿ ತಂದಿಟ್ಟು ಪ್ರಕರಣ ದಾಖಲಿಸುವ ಕುತಂತ್ರ- ಕುಪ್ಪಿತ ಕಾರ್ಯ ಸರ್ಕಾರದಿಂದಲೇ ನಡೆಯುತ್ತಿವೆ. ಇವೆಲ್ಲ ಒಂದಿಲ್ಲೊಂದು ದಿನ ‘ಬೂಮರಾಂಗ್’ ಆಗುವುದು ನಿಶ್ಚಿತ.

ಇನ್ನು ಹೊಟ್ಟೆ, ಬಟ್ಟೆ, ಜೀವನ ನಡೆಸುವ ಉದ್ಯೋಗದ ಪ್ರಶ್ನೆ ಬಂದಾಗ, ಯಾವ ಲಾಠಿ-ಸಾಟಿ- ಧೋತ್ರ ನಡೆಯಲ್ಲ ಎನ್ನುವುದನ್ನು ಪಂಚರಾಜ್ಯ ಚುನಾವಣೆ ತೋರಿಸಿದೆ. ತಮಿಳುನಾಡು ಇರಬಹುದು, ಪಶ್ಚಿಮ ಬಂಗಾಳ ಅಥವಾ ಕೇರಳಂ ಆಗಿರಬಹುದು. ಯುವಕರ ಧ್ವನಿಯನ್ನು ಹತ್ತಿಕ್ಕಿ, ಅವರನ್ನು ನಿರ್ಲಕ್ಷಿಸಿದರೆ ಇನ್ನು ನಡೆಯಲ್ಲ; ಸಾಂಪ್ರದಾಯಿಕ ವೇಷದ ಹಿರಿತಲೆಗಳ, ದರ್ಪ (ಕುಟುಂಬ) ರಾಜಕಾರಣಕ್ಕೆ ನೆಲೆ ಇಲ್ಲ ಎನ್ನುವುದು ಸಾಬೀತಾಗಿದೆ.

ಭ್ರಮಾಲೋಕ ಸೃಷ್ಟಿಸಿ, ಜಾತಿ-ಧರ್ಮದ ಕಂದಕ ನಿರ್ಮಿಸುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು ಎಂದುಕೊಳ್ಳುವರು ‘ಪಂಚರಾಜ್ಯ- ಕಜ್ಜಾಯ’ವನ್ನು ಆಳವಾಗಿ ಅವಲೋಕಿಸಲು ಇದು ಸಕಾಲ !