SK Home Ad
Home ನಮ್ಮ ಜಿಲ್ಲೆ ಧಾರವಾಡ ಚಿನ್ನ ವಾಪಸ್‌ ಕೇಳಿದ್ದಕ್ಕೆ ಗುಂಡು ಹಾರಿಸಿದ ಮಾಲೀಕ; ಮೂವರಿಗೆ ಗಾಯ

ಚಿನ್ನ ವಾಪಸ್‌ ಕೇಳಿದ್ದಕ್ಕೆ ಗುಂಡು ಹಾರಿಸಿದ ಮಾಲೀಕ; ಮೂವರಿಗೆ ಗಾಯ

0
129

ಧಾರವಾಡ: ತಾವು ಅಡವಿಟ್ಟ ಚಿನ್ನವನ್ನು ಮರಳಿ ನೀಡುವಂತೆ ಕೇಳಿದ್ದಕ್ಕೆ ಚಿನ್ನದಂಗಡಿ ಮಾಲೀಕ ತಂದೆ ಮತ್ತು ಮಗನ ಮೇಲೆ ಗುಂಡು ಹಾರಿಸಿದ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ಜಿರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ (56) ಮತ್ತು ಮಗ ಸಿದ್ದಪ್ಪ ಹೊರಕೇರಿ (36) ಎಂಬುವವರೇ ಅಡವಿಟ್ಟ ಚಿನ್ನ ಕೇಳಿ ಗುಂಡೇಟು ತಿಂದವರು. ಶಾಲೆ ಮುಗಿಸಿಕೊಂಡು ಚಿನ್ನದ ಅಂಗಡಿ ಮುಂದಿನ ರಸ್ತೆಯಲ್ಲಿ ಸಾಗಿ ಮನೆಗೆ ಮರಳುತ್ತಿದ್ದ ಶ್ರದ್ಧಾ ಬೈಯಪ್ಪನವರ (10) ಎಂಬ ಬಾಲಕಿಯ ಕಾಲಿಗೆ ಒಂದು ಗುಂಡು ತಾಗಿದೆ. ಮೂವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಹಣಕಾಸಿನ ತೊಂದರೆ ಇದ್ದಿದ್ದಕ್ಕಾಗಿ ನಿಂಗಪ್ಪ ಅವರು ಗರಗ ಗ್ರಾಮದ ಚಿನ್ನದಂಗಡಿ ಮಾಲೀಕ ಮೌನೇಶ ಬಡಿಗೇರ ಎಂಬುವವರ ಬಳಿ ತಮ್ಮ 40 ಗ್ರಾಂ ಚಿನ್ನದ ಸರವನ್ನು ಅಡವಿಟ್ಟು 60 ಸಾವಿರ ರೂ. ಪಡೆದುಕೊಂಡಿದ್ದರು. ಪ್ರತಿ ತಿಂಗಳು ಅದರ ಬಡ್ಡಿಯನ್ನೂ ಕಟ್ಟುತ್ತಿದ್ದರು.

ಈಗ ಹಣಕಾಸಿನ ಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಮೌನೇಶನಿಂದ ಪಡೆದ 60 ಸಾವಿರ ರೂ. ಮರಳಿ ನೀಡಿ ತಮ್ಮ ಚಿನ್ನದ ಸರವನ್ನು ಕೊಡುವಂತೆ ಕೇಳಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಲೀಕ ಮೌನೇಶ, ನಿಮ್ಮ ಚಿನ್ನದ ಸರವನ್ನು ಮಾರಾಟ ಮಾಡಿದ್ದೇನೆ. ಬೇಕಾದರೆ ಬೇರೆ ಚಿನ್ನದ ಸರವನ್ನು ನೀಡುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಆದರೆ, ಇದಕ್ಕೆ ಒಪ್ಪದ ನಿಂಗಪ್ಪ ಹಾಗೂ ಸಿದ್ದಪ್ಪ ಅವರು, ನಮ್ಮ ಚಿನ್ನದ ಸರವನ್ನೇ ನೀಡಬೇಕು. ಇಲ್ಲದಿದ್ದರೆ ನಾವು ದೂರು ಸಲ್ಲಿಸುವುದಾಗಿ ಹೇಳಿ ಅಂಗಡಿಯಿಂದ ಹೊರಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಾಲೀಕ ಮೌನೇಶ ತನ್ನ ಬಳಿ ಇದ್ದ ಪಿಸ್ತೂಲಿನಿಂದ ನಿಂಗಪ್ಪ ಮತ್ತು ಪುತ್ರ ಸಿದ್ಧಪ್ಪನ ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ.

ಇದರಿಂದ ತಪ್ಪಿಸಿಕೊಳ್ಳಲು ತಂದೆ ಮತ್ತು ಮಗ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮುಂದಿನ ರಸ್ತೆಯಲ್ಲಿ ಹೊರಟಿದ್ದ ಶಾಲಾ ಬಾಲಕಿ ಶ್ರದ್ಧಾ ಬೈಯಪ್ಪನವರ (10) ಎಂಬ ಬಾಲಕಿಯ ಕಾಲಿಗೆ ಒಂದು ಗುಂಡು ತಾಗಿದೆ.