SK Home Ad
Home ನಮ್ಮ ಜಿಲ್ಲೆ ರಾಮನಗರ ಕಾರು-ಕ್ಯಾಂಟರ್ ನಡುವೆ ಭೀಕರ ಅಪಘಾತ: ಓರ್ವ ಸಾವು, ಐವರು ಪಾರು

ಕಾರು-ಕ್ಯಾಂಟರ್ ನಡುವೆ ಭೀಕರ ಅಪಘಾತ: ಓರ್ವ ಸಾವು, ಐವರು ಪಾರು

0
116

ರಾಮನಗರ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸೋಮವಾರ ಬೆಳಿಗ್ಗೆ ತವೇರಾ ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನ ಚಾಲಕ ಸಾವಿಗೀಡಾಗಿ, ಮೈಸೂರು ಜಿಲ್ಲೆಯ 5 ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನ ಚಾಲಕ ಆನಂದ್ ಮೃತ ದುರ್ದೈವಿಯಾಗಿದ್ದು, ಮೈಸೂರು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್, ರೇವಣ್ಣ, ರಾಜು, ಪ್ರಕಾಶ್, ಕೃಷ್ಣ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಈ ಪೈಕಿ ರೇವಣ್ಣ ಎಂಬುವರ ಕಾಲು ಮುರಿದಿದ್ದು ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚನ್ನಪಟ್ಟಣದ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಬೆಂಗಳೂರಿನಲ್ಲಿ ಸೋಮವಾರ ಕಡಿಮೆ ಮಕ್ಕಳು ದಾಖಲಾತಿಯಾಗಿರುವ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳಲು ಮೈಸೂರು ಜಿಲ್ಲೆಯ ಐವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತವೇರಾ ಕಾರಿನಲ್ಲಿ ಹೊರಟಿದ್ದರು. ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಬಳಿ ಇವರು ಪ್ರಯಾಣಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ ಆದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬೆಂ-ಮೈ ಎಕ್ಸ್‌ಪ್ರೆಸ್ ವೇನ ಮತ್ತೊಂದು ಬದಿಯ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಇದೇ ಸಮಯಕ್ಕೆ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದ ಕ್ಯಾಂಟರ್‌ಗೆ ಕಾರು ಡಿಕ್ಕಿ ಹೊಡೆದಿದೆ.

ಕ್ಯಾಂಟರ್ ಚಾಲಕ ತಕ್ಷಣ ವೇಗವನ್ನು ತಗ್ಗಿಸಿದ ಪರಿಣಾಮ ಅಪಘಾತದ ತೀವ್ರತೆ ಕಡಿಮೆಯಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಸ್ಥಳೀಯರ ನೆರವಿನಿಂದ ಹೊರಗೆ ತೆಗೆದು ತಕ್ಷಣ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಸ್ಥಳಕ್ಕೆ ಚನ್ನಪಟ್ಟಣ ನಗರ ವೃತ್ತ ನಿರೀಕ್ಷಕ ಶಿವಕುಮಾರ್, ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.