ಬೆಂಗಳೂರು: ದಾವಣಗೆರೆ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೋ (POCSO) ಪ್ರಕರಣ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ವಾಮೀಜಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಠದ ಬಾಲಕರ ಮೇಲೆ ದೌರ್ಜನ್ಯ ಮತ್ತು ಮಕ್ಕಳ ದುರ್ಬಳಕೆ ಎಸಗಿದ ಆರೋಪದಡಿ ವಚನಾನಂದ ಶ್ರೀಗಳ ವಿರುದ್ಧ ಗಂಭೀರ ಸೆಕ್ಷನ್‌ಗಳಡಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಸ್ವಾಮೀಜಿಗೆ ಏಪ್ರಿಲ್ 21 ರಂದು ಜಿಲ್ಲಾ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ನೊಂದ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಆಕ್ಷೇಪ ಮತ್ತು ನೋಟಿಸ್: ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು, “ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿರುವ ವಿಧಾನ ಮೇಲ್ನೋಟಕ್ಕೆ ಸರಿಯಲ್ಲ ಮತ್ತು ಇದು ಆಘಾತಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟಿದೆ. ಈ ಸಂಬಂಧ ವಚನಾನಂದ ಸ್ವಾಮೀಜಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ. ಹೈಕೋರ್ಟ್ ಈಗ ಈ ಜಾಮೀನನ್ನು ರದ್ದುಗೊಳಿಸುತ್ತದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಮಕ್ಕಳಿಂದ ದೂರು: ಸ್ವಾಮೀಜಿಯವರು ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಿಂಸೆ ನೀಡುತ್ತಿದ್ದಾರೆ ಎಂದು ಮಠದ ಮಕ್ಕಳೇ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಸದ್ಯ ಸ್ವಾಮೀಜಿಗೆ ವೈದ್ಯಕೀಯ ಪರೀಕ್ಷೆಯೂ ನಡೆದಿದೆ.
ಪೀಠದಿಂದ ಉಚ್ಛಾಟನೆ: ಇದಕ್ಕೂ ಮುನ್ನ ಎರಡು ಪೀಠಗಳ ನಿರ್ವಹಣೆಯ ವಿವಾದಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಆರಂಭದಲ್ಲಿ ನಡೆದ ಸಭೆಯಲ್ಲಿ ಮಠದ 15 ಟ್ರಸ್ಟಿಗಳ ಪೈಕಿ 13 ಸದಸ್ಯರು ಒಮ್ಮತದಿಂದ ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಛಾಟಿಸಿದ್ದರು.




















