ಇತ್ತೀಚೆಗಷ್ಟೇ ಜಪಾನ್ ದೇಶವು ಭಾರತದ ಮಾವು ನಮಗೆ ಬೇಡ ಎಂದು ಹೇಳುವ ಮೂಲಕ ದೊಡ್ಡ ಶಾಕ್ ನೀಡಿತ್ತು. ಅದರ ಬೆನ್ನಲ್ಲೇ ಈಗ ಭಾರತೀಯ ಆಹಾರ ರಫ್ತು ವಲಯಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಭಾರಿ ಹಿನ್ನಡೆಯಾಗಿದೆ. ಭಾರತದಿಂದ ರಫ್ತಾಗುವ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೀಟನಾಶಕಗಳು ಮತ್ತು ಅಪಾಯಕಾರಿ ಭಾರ ಲೋಹಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಯುರೋಪ್‌ನ ಇಪ್ಪತ್ತೇಳು ಸದಸ್ಯ ರಾಷ್ಟ್ರಗಳು ಸುಮಾರು ಮುನ್ನೂರ ಅರವತ್ತೈದಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿವೆ. ಈ ಆಘಾತಕಾರಿ ಬೆಳವಣಿಗೆಯಿಂದಾಗಿ ಯುರೋಪಿಯನ್ ಒಕ್ಕೂಟದ ದೇಶಗಳಿಗೆ ರಫ್ತಾಗುವ ಭಾರತದ ಆಹಾರ ಉತ್ಪನ್ನಗಳ ಗುಣಮಟ್ಟದ ಕುರಿತು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ. ದೇಶೀಯ ಮಟ್ಟದಲ್ಲಿ ಕೀಟನಾಶಕಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿರುವುದೇ ಈ ದುಸ್ಥಿತಿಗೆ ಕಾರಣ ಎಂದು ಇತ್ತೀಚಿನ ದತ್ತಾಂಶಗಳು ಬಹಿರಂಗಪಡಿಸಿವೆ. ಯುರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರ ಮತ್ತು ಇಯು ಕಮಿಷನ್ ನೀಡಿರುವ ಅಂಕಿ-ಅಂಶಗಳ ಪ್ರಕಾರ, 2024ರಿಂದ 2026ರ ನಡುವಿನ ಅವಧಿಯಲ್ಲಿ ಭಾರತದ ಒಟ್ಟು 450ಕ್ಕೂ ಹೆಚ್ಚು ಉತ್ಪನ್ನಗಳನ್ನು ಯುರೋಪ್ ಗಡಿಯಲ್ಲಿ ತಡೆಯಲಾಗಿದೆ ಅಥವಾ ಮಾರುಕಟ್ಟೆಯಿಂದಲೇ ವಾಪಸ್ ಕಳುಹಿಸಲಾಗಿದೆ.
ಹೀಗೆ ತಿರಸ್ಕೃತಗೊಂಡಿರುವ 365 ಉತ್ಪನ್ನಗಳಲ್ಲಿ ತೀವ್ರ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿದ್ದು, ಸುಮಾರು 50 ಉತ್ಪನ್ನಗಳಲ್ಲಿ ಸಾಲ್ಮೊನೆಲ್ಲಾ ಮತ್ತು ಆಫ್ಲಾಟಾಕ್ಸಿನ್ ಬಿ-ಒನ್ ನಂತಹ ಅಪಾಯಕಾರಿ ರೋಗಕಾರಕ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ಇನ್ನುಳಿದ ಕೆಲವು ಉತ್ಪನ್ನಗಳು ಖನಿಜ ತೈಲ ಸೇರಿದಂತೆ ಇನ್ನಿತರ ಗೋದಾಮಿನ ಮಾಲಿನ್ಯದಿಂದಾಗಿ ತಿರಸ್ಕೃತಗೊಂಡಿವೆ. ನಿಷೇಧಕ್ಕೊಳಗಾದ ಈ ಉತ್ಪನ್ನಗಳ ಪಟ್ಟಿಯಲ್ಲಿ ದಿನಬಳಕೆಯ ಮೂಲಿಕೆಗಳು, ಮಸಾಲೆ ಪದಾರ್ಥಗಳು, ಹಣ್ಣು-ತರಕಾರಿಗಳು, ಒಣಗಿದ ಹಣ್ಣುಗಳು, ಧಾನ್ಯಗಳು, ಬೇಕರಿ ತಿಂಡಿಗಳು ಮತ್ತು ಪೌಷ್ಟಿಕಾಂಶದ ಆಹಾರಗಳು ಪ್ರಮುಖವಾಗಿವೆ. ಇವುಗಳಲ್ಲಿ ಮಾನವನ ನರಮಂಡಲಕ್ಕೆ ತೀವ್ರ ಹಾನಿ ಮಾಡುವ ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ‘ಕ್ಲೋರ್‌ಪೈರಿಫೊಸ್’ ಕೀಟನಾಶಕವನ್ನು ಜಗತ್ತಿನ 44 ದೇಶಗಳು ಈಗಾಗಲೇ ಸಂಪೂರ್ಣವಾಗಿ ನಿಷೇಧಿಸಿವೆ. ಆದರೆ, ದುರದೃಷ್ಟವಶಾತ್ ಭಾರತದ ಸುಮಾರು 135 ಉತ್ಪನ್ನಗಳಲ್ಲಿ ಇದೇ ಕೀಟನಾಶಕ ಪತ್ತೆಯಾಗಿದೆ.
ಅಷ್ಟೇ ಅಲ್ಲದೆ, ರಕ್ತದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ಗೆ ಕಾರಣವಾಗುವ ‘ಎಥಿಲೀನ್ ಆಕ್ಸೈಡ್’ ಎಂಬ ರಾಸಾಯನಿಕವು ಭಾರತದಲ್ಲಿ ನೋಂದಣಿಯೇ ಆಗಿಲ್ಲದಿದ್ದರೂ, ನಲವತ್ತು ಉತ್ಪನ್ನಗಳಲ್ಲಿ ಕಂಡುಬಂದಿದೆ. ಸ್ಪೇನ್ ದೇಶವು ಭಾರತದ ಪ್ರಸಿದ್ಧ “ಆರ್ಗಾನಿಕ್ ಅಶ್ವಗಂಧ ಬೇರು”ಗಳನ್ನು ಇದೇ ಕಾರಣಕ್ಕೆ ತಿರಸ್ಕರಿಸಿದೆ. ಇನ್ನುಳಿದಂತೆ ಒಂಬತ್ತು ಉತ್ಪನ್ನಗಳಲ್ಲಿ ಕ್ಯಾಡ್ಮಿಯಮ್, ಏಳರಲ್ಲಿ ಸೀಸ ಮತ್ತು ಐದು ಉತ್ಪನ್ನಗಳಲ್ಲಿ ಪಾದರಸದಂತಹ ಭಾರ ಲೋಹಗಳು ಪತ್ತೆಯಾಗಿದ್ದರೆ, ಯುರೋಪ್‌ನಲ್ಲಿ ನಿಷೇಧಿತವಾಗಿರುವ ‘ಟ್ರೈಸೈಕ್ಲಾಜೋಲ್’ ಎಂಬ ರಾಸಾಯನಿಕದ ಅತಿಯಾದ ಬಳಕೆಯಿಂದಾಗಿ ಭಾರತದ ಐವತ್ತಮೂರು ಅಕ್ಕಿ ರಫ್ತು ಆರ್ಡರ್‌ಗಳು ಕೂಡ ರದ್ದಾಗಿವೆ.
ಆದರೆ ಈ ಇಡೀ ಗಂಭೀರ ವಿಷಯದ ಕುರಿತು ಭಾರತೀಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವಾಗಲಿ ಅಥವಾ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲದಿರುವುದು ಆತಂಕ ಮೂಡಿಸಿದೆ. ಈ ಮಾಲಿನ್ಯದ ಸರಪಳಿ ಎಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಸರ್ಕಾರ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಆಹಾರ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಸಮಸ್ಯೆ ಬಂದಾಗಲೆಲ್ಲಾ ರೈತರ ಮೇಲೆ ಗೂಬೆ ಕೂರಿಸಲಾಗುತ್ತದೆ, ಆದರೆ ಎಥಿಲೀನ್ ಆಕ್ಸೈಡ್‌ನಂತಹ ರಾಸಾಯನಿಕಗಳನ್ನು ರೈತರು ಹೊಲದಲ್ಲಿ ಬಳಸುವುದಿಲ್ಲ. ಬದಲಿಗೆ ದೊಡ್ಡ ದೊಡ್ಡ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳಲ್ಲಿ ಉತ್ಪನ್ನಗಳನ್ನು ರಕ್ಷಿಸಲು ಇವುಗಳನ್ನು ಬಳಸಲಾಗುತ್ತದೆ. ನಮ್ಮ ದೇಶದಲ್ಲಿ ಉತ್ಪನ್ನದ ಪ್ರತಿಯೊಂದು ಹಂತದಲ್ಲೂ ತಪಾಸಣೆ ನಡೆಸುವ ಕಟ್ಟುನಿಟ್ಟಾದ ವ್ಯವಸ್ಥೆ ಇಲ್ಲದಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.






















