SK Home Ad
Home ಸುದ್ದಿ ವಿದೇಶ IPhO 2026: ಕೊಲಂಬಿಯಾದಲ್ಲಿ ಮಿಂಚಿದ ಭಾರತೀಯ ಪ್ರತಿಭೆಗಳು

IPhO 2026: ಕೊಲಂಬಿಯಾದಲ್ಲಿ ಮಿಂಚಿದ ಭಾರತೀಯ ಪ್ರತಿಭೆಗಳು

0
43

ನವದೆಹಲಿ: ಕೊಲಂಬಿಯಾದಲ್ಲಿ ನಡೆದ 56ನೇ ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ (International Physics Olympiad – IPhO) 2026ರಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಎಲ್ಲಾ ಐದು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಜಗತ್ತಿನ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.

ಈ ಬಾರಿ ಒಲಿಂಪಿಯಾಡ್‌ನಲ್ಲಿ 87 ದೇಶಗಳ 381 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತದ ಐವರು ವಿದ್ಯಾರ್ಥಿಗಳೂ ಚಿನ್ನ ಗೆಲ್ಲುವ ಮೂಲಕ ಭಾರತವು ಚೀನಾ, ಕಝಾಕಿಸ್ತಾನ್, ರಷ್ಯಾ, ದಕ್ಷಿಣ ಕೊರಿಯಾ ಮತ್ತು ತೈವಾನ್ ಜೊತೆಗೆ ವಿಶ್ವದರ್ಜೆಯಲ್ಲಿ ಜಂಟಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಅಕ್ರಮ ಆರೋಪದ ಬೆನ್ನಲ್ಲೇ KPSC ಅಧ್ಯಕ್ಷ ಸಾಹುಕಾರ್‌ ಅಮಾನತು

ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗಳಲ್ಲಿ ಪುಣೆಯ ಕನಿಷ್ಕ್ ಜೈನ್, ಇಂದೋರ್‌ನ ರಿದ್ಧೇಶ್ ಅನಂತ್ ಬೆಂಡಾಲೆ, ನವದೆಹಲಿಯ ರಿಷಿತ್ ಗರ್ಗ್, ಮುಂಬೈನ ಶ್ರೇಷ್ಠ್ ಸುರೈಯಾ ಮತ್ತು ಅಹಮದಾಬಾದ್‌ನ ಸ್ವರಿತ್ ಜೋಶಿ ಸೇರಿದ್ದಾರೆ. ಈ ಯುವ ಪ್ರತಿಭೆಗಳ ಸಾಧನೆ ದೇಶದ ವಿಜ್ಞಾನ ಶಿಕ್ಷಣ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬಿದೆ.

ಭಾರತದ ಈ ಯಶಸ್ಸಿನ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದು, ಈ ವಿದ್ಯಾರ್ಥಿಗಳ ಸಾಧನೆ ಭಾರತದ ಭವಿಷ್ಯದ ಬಗ್ಗೆ ಅಪಾರ ಆಶಾವಾದ ಮೂಡಿಸಿದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳು, ಶಿಕ್ಷಕರು ಮತ್ತು ಮಾರ್ಗದರ್ಶಕರು ಸೀಮಿತ ಸಂಪನ್ಮೂಲಗಳಲ್ಲಿಯೇ ವಿಶ್ವದರ್ಜೆಯ ಒಲಿಂಪಿಯಾಡ್ ಕಾರ್ಯಕ್ರಮವನ್ನು ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದೂ ಅವರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ನೇಪಾಳದಲ್ಲಿ ಬೆಳಗಾವಿ ಯುವಕನ ಹತ್ಯೆ: ರೂಮ್‌ಮೇಟ್‌ ವಿರುದ್ಧ ಆರೋಪ

ಭಾರತದಲ್ಲಿ ಒಲಿಂಪಿಯಾಡ್ ತರಬೇತಿಯನ್ನು ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ (HBCSE) ಮುನ್ನಡೆಸುತ್ತಿದ್ದು, ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಧನೆಗೆ ಪ್ರಮುಖ ಕಾರಣವಾಗಿದೆ. ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ತರಬೇತಿ ನೀಡುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ.

ಐದು ಚಿನ್ನದ ಪದಕಗಳ ಈ ಸಾಧನೆ ಕೇವಲ ವಿದ್ಯಾರ್ಥಿಗಳ ವೈಯಕ್ತಿಕ ಗೆಲುವಲ್ಲ, ಭಾರತದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಬೆಳವಣಿಗೆಯ ಸಂಕೇತವೂ ಆಗಿದೆ. ಯುವ ವಿಜ್ಞಾನಿಗಳ ಈ ಸಾಧನೆ ದೇಶದ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.