ರಾಜಸ್ಥಾನ ರಾಯಲ್ಸ್ ತಂಡದ ಭರವಸೆಯ ಆಟಗಾರ ವೈಭವ್ ಸೂರ್ಯವಂಶಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹಣ ಕೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣವಾದ ʻಎಕ್ಸ್ʼನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್‌ಗೆ ಸಾವಿರಾರು ಲೈಕ್‌ಗಳು ಮತ್ತು ಪ್ರತಿಕ್ರಿಯೆಗಳು ಬಂದಿವೆ.
ಅಸಲಿಗೆ ವಿಡಿಯೋದಲ್ಲಿ ಏನಿದೆ?
ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರೊಂದಿಗೆ ವೈಭವ್ ಸೂರ್ಯವಂಶಿ ವಿಮಾನ ನಿಲ್ದಾಣದಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಇಬ್ಬರು ಮಕ್ಕಳು ವೈಭವ್ ಬಳಿ ಬಂದು ನಿಮ್ಮ ಜತೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಕೇಳಿದ್ದಾರೆ. ಆಗ ವೈಭವ್ “ಉಚಿತವಾಗಿ ಸೆಲ್ಫಿ ಕೊಡಲ್ಲ, ಒಂದು ಸೆಲ್ಫಿಗೆ 100 ರೂ ತೆಗೆದುಕೊಳ್ಳುತ್ತೇನೆ. ಇಬ್ಬರು ತಲಾ 100 ರೂ. ಕೊಡಿ” ಎಂದು ಗಂಭೀರವಾಗಿ ಹೇಳಿದ್ದಾರೆ. ಇದಾದ ಕೆಲ ಕ್ಷಣದಲ್ಲಿಯೇ ಮಕ್ಕಳು 200 ರೂ. ಹಣವನ್ನು ತಂದು ವೈಭವ್ ಕೈಗೆ ಇಟ್ಟಿದ್ದಾರೆ.
ಕೂಡಲೇ ವೈಭವ್ “ತಮಾಷೆ ಮಾಡಿದೆ ಬ್ರದರ್” ಎಂದು ಹೇಳಿ ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈಭವ್ ಅವರ ಈ ತಮಾಷೆ, ಹಾಸ್ಯಪ್ರಜ್ಞೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.























