ಅಂಡರ್-19 ಏಷ್ಯಾ ಕಪ್ 2026ರ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 1 ವಿಕೆಟ್ಗಳ ರೋಚಕ ಜಯ ಸಾಧಿಸಿದ ಬಳಿಕ ಭಾರತೀಯ ಯುವ ಆಟಗಾರರು ಮೈದಾನದಲ್ಲಿ ತೋರಿದ ಆಕ್ರಮಣಕಾರಿ ಸಂಭ್ರಮಾಚರಣೆಯ ಕುರಿತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ. ಯುವ ಆಟಗಾರರ ಉತ್ಸಾಹವನ್ನು ಮೆಚ್ಚಿಕೊಂಡಿರುವ ಅವರು, ಮೈದಾನದ ಹೊರಗೆ ಪರಸ್ಪರ ಗೌರವ ಮತ್ತು ಸ್ನೇಹವನ್ನು ಉಳಿಸಿಕೊಳ್ಳುವ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸುತ್ತಿದ್ದಂತೆಯೇ ಮೈದಾನಕ್ಕೆ ನುಗ್ಗಿದ ಭಾರತದ ಆಟಗಾರರು ಪಾಕ್ ಆಟಗಾರರ ಎದುರೇ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದು ಕ್ರೀಡಾ ವಲಯದಲ್ಲಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಪಿಟಿವಿ ಜೊತೆ ಮಾತನಾಡಿದ ಅಖ್ತರ್, “ನೀವು ಯುವಕರು, ನಿಮ್ಮಲ್ಲಿ ಉತ್ಸಾಹ ಮತ್ತು ಆಕ್ರಮಣಶೀಲತೆ ಇರುವುದು ಸಹಜ. ನನಗೂ ನಿಮ್ಮ ಆಕ್ರಮಣಕಾರಿ ಆಟ ಇಷ್ಟವಾಯಿತು. ಆದರೆ, 15-20 ವರ್ಷಗಳ ವೃತ್ತಿಜೀವನದ ನಂತರವೂ ನೀವು ಉತ್ತಮ ಸ್ನೇಹಿತರಾಗಿ ಉಳಿಯುವಂತಹ ಮೌಲ್ಯಗಳನ್ನು ಕಲಿಯಬೇಕು” ಎಂದಿದ್ದಾರೆ.
ತಮ್ಮ ಹಳೆಯ ದಿನಗಳನ್ನು ಸ್ಮರಿಸಿದ ಅಖ್ತರ್, “ಇಂದಿಗೂ ನಾನು ಸಚಿನ್ ತೆಂಡೂಲ್ಕರ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟರ್ ಎಂದು ಗೌರವಿಸುತ್ತೇನೆ. ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ನನ್ನ ಉತ್ತಮ ಸ್ನೇಹಿತರು. ನಾವೆಲ್ಲಾ ಒಟ್ಟಿಗೆ ಆಡಿದ್ದೇವೆ, ಆದರೆ ಎಂದಿಗೂ ಈ ರೀತಿ ಅತಿರೇಕದಿಂದ ವರ್ತಿಸಿರಲಿಲ್ಲ” ಎಂದು ಹೇಳಿದ್ದಾರೆ. ಇನ್ನು ಫೈನಲ್ ಪಂದ್ಯದ ಬಗ್ಗೆ ಮಾತನಾಡುತ್ತಾ, “ಈ ಟೂರ್ನಿಯಲ್ಲಿ ಪಾಕಿಸ್ತಾನ ಅತ್ಯುತ್ತಮ ಹಾಗೂ ಅನುಭವಿ ತಂಡವಾಗಿತ್ತು. ಆದರೆ ಎಂದಿನಂತೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ಭಾರತ ಯಶಸ್ವಿಯಾಯಿತು” ಎಂದು ಟೀಮ್ ಇಂಡಿಯಾದ ಮಾನಸಿಕ ಸ್ಥೈರ್ಯವನ್ನು ಶ್ಲಾಘಿಸಿದ್ದಾರೆ.






















