ಹುಬ್ಬಳ್ಳಿ: ಅಮೆರಿಕದಲ್ಲಿ ನಡೆದ ವಿಶ್ವಮಟ್ಟದ DARPA TRIAGE ಸ್ಪರ್ಧೆಯಲ್ಲಿ ಶಿರಸಿ ಮೂಲದ ಯುವ ಸಾಫ್ಟ್ವೇರ್ ಎಂಜಿನಿಯರ್ ಚಿರಾಗ್ ರಮೇಶ ಹೆಗಡೆ ಪ್ರಥಮ ಸ್ಥಾನ ಪಡೆದು 1 ಮಿಲಿಯನ್ ಡಾಲರ್ (ಸುಮಾರು ₹9.64 ಕೋಟಿ) ಬಹುಮಾನ ಗೆದ್ದಿದ್ದಾರೆ.
ನವೆಂಬರ್ 13ರಂದು ನಡೆದ ಈ ಸ್ಪರ್ಧೆಯಲ್ಲಿ ಚಿರಾಗ್ ಏಕವ್ಯಕ್ತಿ ತಂಡವಾಗಿ ಭಾಗವಹಿಸಿದ್ದರು. ನೈಸರ್ಗಿಕ ವಿಕೋಪ, ಭೀಕರ ಅಪಘಾತ ಹಾಗೂ ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳ ಸ್ಥಿತಿಯನ್ನು ತ್ವರಿತವಾಗಿ ವಿಶ್ಲೇಷಿಸಿ, ಯಾರಿಗೆ ಮೊದಲು ಚಿಕಿತ್ಸೆ ನೀಡಬೇಕು ಎಂಬುದನ್ನು ಗುರುತಿಸುವ AI ಆಧಾರಿತ ಸಾಫ್ಟ್ವೇರ್ ಮಾದರಿಯನ್ನು ಅವರು ಅಭಿವೃದ್ಧಿಪಡಿಸಿದ್ದರು. ಈ ನವೀನ ಮಾದರಿಗೆ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಪ್ರೈಜ್ ಲಭಿಸಿದೆ.
ಶಿರಸಿಯ ಮುಂಡಿಗೇಸರ ಮೂಲದವರಾದ ಚಿರಾಗ್, ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿರುವ ಉದ್ಯಮಿ ದಂಪತಿ ಬೀನಾ ಮತ್ತು ರಮೇಶ ಹೆಗಡೆ ಹೂತನ ಅವರ ಎರಡನೇ ಪುತ್ರ. 2023ರಲ್ಲಿ ಅಸ್ಸಾಂನ ಗುವಾಹಟಿಯ ಐಐಟಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.
ಮಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಸ್ವಯಂ ಅಧ್ಯಯನ ನಡೆಸಿರುವ ಅವರು, ಕೇವಲ 10 ತಿಂಗಳ ಪರಿಶ್ರಮದಿಂದ ನೈಜ ವೈದ್ಯಕೀಯ ದತ್ತಾಂಶಗಳನ್ನು ಆಧರಿಸಿ ಈ ಮಾದರಿಯನ್ನು ರೂಪಿಸಿದ್ದಾರೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ವೈದ್ಯರಿಗೆ ನೆರವಾಗುವ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಅವರ ಸಾಧನೆಯ ವಿಶೇಷತೆಯಾಗಿದೆ.
ತಂತ್ರಜ್ಞಾನವನ್ನು ಮಾನವ ಜೀವಗಳ ರಕ್ಷಣೆಗೆ ಬಳಸುವ ಆಶಯ ಹೊಂದಿರುವ ಚಿರಾಗ್ ಅವರ ಅಂತಾರಾಷ್ಟ್ರೀಯ ಸಾಧನೆ ಹೆಮ್ಮೆ ಮೂಡಿಸಿದೆ.




















