ವಾಟ್ಸಾಪ್‌ಗೆ ಹೊಸ ಜಾಗತಿಕ ಮುಖ್ಯಸ್ಥರಾಗಿ ಕುನಾಲ್ ಶಾ: ಜೊತೆಗೆ ಬಂತು ಬಹುನಿರೀಕ್ಷಿತ ಫೀಚರ್ – ಇನ್‌ಸ್ಟಾಗ್ರಾಮ್ ಮಾದರಿಯಲ್ಲಿ ವಾಟ್ಸಾಪ್‌ಗೂ ಯೂಸರ್‌ನೇಮ್
ನವದೆಹಲಿ: ಜಗತ್ತಿನ ಅತಿದೊಡ್ಡ ಮೆಸೇಜಿಂಗ್ ವೇದಿಕೆಗಳಲ್ಲಿ ಒಂದಾದ ವಾಟ್ಸಾಪ್ ತನ್ನ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹಾಗೂ ಬಹುನಿರೀಕ್ಷಿತ ಪ್ರೈವೆಸಿ ವೈಶಿಷ್ಟ್ಯವನ್ನು ಅಧಿಕೃತವಾಗಿ ಘೋಷಿಸಿದೆ. ಇನ್ಮುಂದೆ ಬಳಕೆದಾರರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆ ಇತರರೊಂದಿಗೆ ಸಂವಹನ ನಡೆಸಬಹುದಾಗಿದ್ದು, ಇದಕ್ಕಾಗಿ ‘ಯೂಸರ್‌ನೇಮ್’ (Username) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಹೊಸ ವೈಶಿಷ್ಟ್ಯದ ಪ್ರಕಾರ, ಪ್ರತಿಯೊಬ್ಬ ಬಳಕೆದಾರರು ತಮ್ಮ ಇಷ್ಟದ ವಿಶಿಷ್ಟ ಬಳಕೆದಾರ ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಹೊಸ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುವಾಗ ಅಥವಾ ದೊಡ್ಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ಭಾಗವಹಿಸುವಾಗ ಮೊಬೈಲ್ ಸಂಖ್ಯೆ ಬಹಿರಂಗವಾಗುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: SIR ಆತಂಕವೇ: ಜೂನ್ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ
ವಾಟ್ಸಾಪ್ ತನ್ನ ಅಧಿಕೃತ ಪ್ರಕಟಣೆಯಲ್ಲಿ, “ಫೋನ್ ಸಂಖ್ಯೆ ತುಂಬಾ ವೈಯಕ್ತಿಕ ಮಾಹಿತಿಯಾಗಿದೆ. ಕೆಲವೊಮ್ಮೆ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆ ಇತರರೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತಾರೆ. ಈ ಕಾರಣಕ್ಕಾಗಿ ನಾವು ವಾಟ್ಸಾಪ್‌ನಲ್ಲಿ ಯೂಸರ್‌ನೇಮ್ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದೇವೆ” ಎಂದು ತಿಳಿಸಿದೆ.
ಯೂಸರ್‌ನೇಮ್ ಕಾಯ್ದಿರಿಸುವುದು ಹೇಗೆ? : ಈ ವಾರದಿಂದಲೇ ಬಳಕೆದಾರರು ತಮ್ಮ ಇಷ್ಟದ ಯೂಸರ್‌ನೇಮ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಬೇಕು. ನಂತರ Settings > Account > Username ವಿಭಾಗಕ್ಕೆ ತೆರಳಿ ಲಭ್ಯವಿರುವ ಹೆಸರನ್ನು ಆಯ್ಕೆ ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದು. ಈ ವೈಶಿಷ್ಟ್ಯವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಜಾಗತಿಕ ಮಟ್ಟದಲ್ಲಿ ಸಂಪೂರ್ಣವಾಗಿ ಲಭ್ಯವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಲಿಂಡರ್ ಸ್ಫೋಟ
ದೊಡ್ಡ ಗ್ರೂಪ್‌ಗಳಲ್ಲಿ ನಂಬರ್ ಹೈಡ್ : ಈ ಹೊಸ ವೈಶಿಷ್ಟ್ಯದ ಮತ್ತೊಂದು ಪ್ರಮುಖ ಅಂಶವೆಂದರೆ, ದೊಡ್ಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ಸೇರುವಾಗ ಅಥವಾ ಮೊದಲ ಬಾರಿಗೆ ಅಪರಿಚಿತ ವ್ಯಕ್ತಿ ಅಥವಾ ವ್ಯವಹಾರ ಸಂಸ್ಥೆಗೆ ಸಂದೇಶ ಕಳುಹಿಸುವಾಗ ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಪ್ರದರ್ಶಿಸಲಾಗುವುದಿಲ್ಲ. ಇದರಿಂದ ಬಳಕೆದಾರರ ಖಾಸಗಿತನ ಮತ್ತಷ್ಟು ಬಲಗೊಳ್ಳಲಿದ್ದು, ಅನಗತ್ಯ ಸಂಪರ್ಕಗಳು ಮತ್ತು ಸ್ಪ್ಯಾಮ್ ಸಂದೇಶಗಳನ್ನು ತಡೆಯಲು ಸಹಕಾರಿಯಾಗಲಿದೆ.
ಸಾರ್ವಜನಿಕ ಡೈರೆಕ್ಟರಿ ಇರುವುದಿಲ್ಲ : ವಾಟ್ಸಾಪ್ ಸ್ಪಷ್ಟಪಡಿಸಿರುವಂತೆ, ಇನ್‌ಸ್ಟಾಗ್ರಾಮ್, ಎಕ್ಸ್ (ಹಿಂದಿನ ಟ್ವಿಟರ್) ಮಾದರಿಯಲ್ಲಿ ಯೂಸರ್‌ನೇಮ್ ಹುಡುಕಲು ಯಾವುದೇ ಸಾರ್ವಜನಿಕ ಡೈರೆಕ್ಟರಿ ಅಥವಾ ಸಜೆಶನ್ ವ್ಯವಸ್ಥೆ ಇರುವುದಿಲ್ಲ. ಯಾರಾದರೂ ನಿಮ್ಮನ್ನು ಸಂಪರ್ಕಿಸಬೇಕಾದರೆ ಅವರಿಗೆ ನಿಮ್ಮ ನಿಖರವಾದ ಯೂಸರ್‌ನೇಮ್ ತಿಳಿದಿರಬೇಕು. ಇದಲ್ಲದೆ, ಹೆಚ್ಚುವರಿ ಸುರಕ್ಷತೆಗಾಗಿ ‘ಯೂಸರ್‌ನೇಮ್ ಕೀ’ ಎಂಬ ಆಯ್ಕೆಯನ್ನೂ ಪರಿಚಯಿಸುವ ಸಾಧ್ಯತೆ ಇದೆ. ಇದರಿಂದ ಬಳಕೆದಾರರು ತಮ್ಮ ಖಾತೆಯ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಬಹುದು.
ಇದನ್ನೂ ಓದಿ: SIR ಪ್ರಕ್ರಿಯೆಗೆ ನೆರವಾಗಲು ಶಾಶ್ವತ ನಿವಾಸ ಪ್ರಮಾಣಪತ್ರ: CM
ಇದೇ ವೇಳೆ, ಭಾರತೀಯ ಫಿನ್‌ಟೆಕ್ ಸಂಸ್ಥೆ CRED ಸಂಸ್ಥಾಪಕ ಕುನಾಲ್ ಶಾ ಅವರನ್ನು ವಾಟ್ಸಾಪ್‌ನ ಹೊಸ ಜಾಗತಿಕ ಮುಖ್ಯಸ್ಥರನ್ನಾಗಿ ಮೆಟಾ ನೇಮಕ ಮಾಡಿದ್ದು, ಅವರು ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.





















