SK Home Ad
Home ಸುದ್ದಿ ರಾಜ್ಯ ರೈತರಿಗಾಗಿ ಸಂಯುಕ್ತ ಕರ್ನಾಟಕ ‘ನೇರ ಫೋನ್ ಇನ್’ ಕಾರ್ಯಕ್ರಮ

ರೈತರಿಗಾಗಿ ಸಂಯುಕ್ತ ಕರ್ನಾಟಕ ‘ನೇರ ಫೋನ್ ಇನ್’ ಕಾರ್ಯಕ್ರಮ

0
115

ಸಂಯುಕ್ತ ಕರ್ನಾಟಕದಿಂದ ರೈತರಿಗಾಗಿ ಉಪಯುಕ್ತ ‘ನೇರ ಫೋನ್ ಇನ್’ ಕಾರ್ಯಕ್ರಮ

ಹುಬ್ಬಳ್ಳಿ: ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ‘ಸಂಯುಕ್ತ ಕರ್ನಾಟಕ’ ವಿಶೇಷ ‘ನೇರ ಫೋನ್ ಇನ್’ ಕಾರ್ಯಕ್ರಮವನ್ನು ಆಯೋಜಿಸಿದೆ. ಇಂದು (ಮೇ 30ರಂದು) ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ರೈತರ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿದ್ದಾರೆ.

ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ ರೈತರು ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಹಾಗೂ ಹೊಲಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ರೈತ ಸಂಪರ್ಕ ಕೇಂದ್ರಗಳು, ಸಹಕಾರಿ ಸಂಘಗಳು ಹಾಗೂ ಕೃಷಿ ಇಲಾಖೆಯ ವಿವಿಧ ಕೇಂದ್ರಗಳಲ್ಲಿ ಬೀಜ ಮತ್ತು ರಸಗೊಬ್ಬರಗಳ ಖರೀದಿಗೆ ರೈತರು ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.

ಕಾರ್ಯಕ್ರಮದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಯಾವ ಬೆಳೆ ಬೆಳೆಯುವುದು ಸೂಕ್ತ, ಯಾವ ಬೀಜ ಆಯ್ಕೆ ಮಾಡಬೇಕು, ಗುಣಮಟ್ಟದ ಬೀಜವನ್ನು ಗುರುತಿಸುವ ವಿಧಾನ, ವಿವಿಧ ಬೆಳೆಗಳ ಲಾಭದಾಯಕತೆ, ಪ್ರಕೃತಿ ವಿಕೋಪದ ಅಪಾಯ ಕಡಿಮೆ ಇರುವ ಬೆಳೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಶ್ನೆ ಕೇಳಬಹುದು.

ಇದರ ಜೊತೆಗೆ ಬಿತ್ತನೆಗೆ ಸೂಕ್ತ ಅವಧಿ, ಸರ್ಕಾರದಿಂದ ಲಭ್ಯವಿರುವ ಬಿತ್ತನೆ ಬೀಜ ವಿತರಣೆ ವ್ಯವಸ್ಥೆ, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ಲಭ್ಯತೆ, ರಸಗೊಬ್ಬರ ವಿತರಣೆಯ ಮಾನದಂಡಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಕೃಷಿ ತಜ್ಞರಿಂದ ಮಾಹಿತಿ ಪಡೆಯುವ ಅವಕಾಶವೂ ಇದೆ.

ಬಿತ್ತನೆಗೂ ಮುನ್ನ ಬೀಜೋಪಚಾರದ ಮಹತ್ವ, ಅದರ ಸರಿಯಾದ ವಿಧಾನ, ಕಂಪನಿಗಳ ಬೀಜಗಳ ಗುಣಮಟ್ಟ ಪರಿಶೀಲನೆ, ಕಳಪೆ ಬೀಜಗಳಿಂದ ಉಂಟಾಗುವ ಸಮಸ್ಯೆಗಳು ಹಾಗೂ ಅಂತಹ ಸಂದರ್ಭಗಳಲ್ಲಿ ರೈತರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡ ರೈತರು ಪ್ರಶ್ನೆ ಕೇಳಬಹುದು.

ಇದಲ್ಲದೆ ಬೆಳೆ ವಿಮೆ ಯೋಜನೆಗಳು, ವಿಮೆ ಪರಿಹಾರ ಪಡೆಯುವ ವಿಧಾನ, ತಾಂತ್ರಿಕ ಅಡಚಣೆಗಳು, ಕೃಷಿ ಯಂತ್ರೋಪಕರಣಗಳ ಬಾಡಿಗೆ ವ್ಯವಸ್ಥೆ ಹಾಗೂ ‘ಕೃಷಿ ಯಂತ್ರಧಾರಾ’ ಯೋಜನೆಯಡಿ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಸಹ ಮಾಹಿತಿ ನೀಡಲಾಗುತ್ತದೆ.

ಕೃಷಿ ಇಲಾಖೆ ಅಧಿಕಾರಿಗಳು ರೈತರ ಎಲ್ಲ ಸಂದೇಹಗಳಿಗೆ ಉತ್ತರ ನೀಡಲಿದ್ದು, ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಕೇಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರಶ್ನೆಗಳನ್ನು ಕೇಳಲು ಈ ಮೊಬೈಲ್ ಸಂಖ್ಯೆಗಳ ಸಂಪರ್ಕಿಸಬಹುದು: 📞 9916591157, 📞 9902098730

ಮುಂಗಾರು ಹಂಗಾಮಿನ ಆರಂಭದ ಸಂದರ್ಭದಲ್ಲಿ ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವ ಈ ಕಾರ್ಯಕ್ರಮ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ನೆರವಾಗುವ ನಿರೀಕ್ಷೆಯಿದೆ.