SK Home Ad
Home ಸುದ್ದಿ ರಾಜ್ಯ ಶಾಲೆಯಲ್ಲೇ AI ಶಿಕ್ಷಣ: Google ಸಮಾವೇಶದಲ್ಲಿ CM ಮಾಸ್ಟರ್ ಪ್ಲಾನ್!

ಶಾಲೆಯಲ್ಲೇ AI ಶಿಕ್ಷಣ: Google ಸಮಾವೇಶದಲ್ಲಿ CM ಮಾಸ್ಟರ್ ಪ್ಲಾನ್!

0
66

ಭಾರತದ ಅಧಿಕೃತ AI ರಾಜಧಾನಿಯಾಗಿ ಕರ್ನಾಟಕ ರೂಪಿಸಲು ಸರ್ಕಾರ ಬದ್ಧ: ರೈತರು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಅಭಿವೃದ್ಧಿಗೆ ಎಐ ಬಳಕೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ನಗರದ ಬಿಐಇಸಿ (ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್)ನಲ್ಲಿ ನಡೆದ ಪ್ರತಿಷ್ಠಿತ ‘Google I/O Connect India – 2026’ ಸಮಾವೇಶವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. ಈ ವೇಳೆ ಕರ್ನಾಟಕವನ್ನು ಇಡೀ ಭಾರತದ ಅಧಿಕೃತ ‘ಎಐ ರಾಜಧಾನಿ’ಯನ್ನಾಗಿ ರೂಪಿಸುವ ಗುರಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದ ಐದು ಅತ್ಯುತ್ತಮ ಎಐ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ದೇಶದ ಒಟ್ಟು ಯೂನಿಕಾರ್ನ್ ನವೋದ್ಯಮಗಳಲ್ಲಿ ಶೇ.40ರಷ್ಟು ಪಾಲು ಹೊಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಇನ್ನಷ್ಟು ಬಲಿಷ್ಠ ರಾಜ್ಯವನ್ನಾಗಿ ರೂಪಿಸಲು ಸರ್ಕಾರ ಸ್ಪಷ್ಟ ಕಾರ್ಯತಂತ್ರದೊಂದಿಗೆ ಮುಂದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವಶ

ಈ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ದೇಶದ ಮೊಟ್ಟಮೊದಲ ಹಾಗೂ ಅತಿದೊಡ್ಡ ಎಐ ವಿಶ್ವವಿದ್ಯಾಲಯ ಮತ್ತು ಎಐ ಇನ್ನೋವೇಶನ್ ಹಬ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ. ಜೊತೆಗೆ ಶಾಲಾ ಹಂತದಿಂದಲೇ ಎಐ ಶಿಕ್ಷಣವನ್ನು ಪರಿಚಯಿಸಿ, ಭವಿಷ್ಯದ ತಂತ್ರಜ್ಞಾನ ಆಧಾರಿತ ಉದ್ಯೋಗಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.

ಎಐ ಆರ್ಥಿಕತೆಗೆ ಅಗತ್ಯವಾದ ಬಲಿಷ್ಠ ಮೂಲಸೌಕರ್ಯ ನಿರ್ಮಾಣಕ್ಕಾಗಿ ಕರಾವಳಿ ಜಿಲ್ಲೆ ಹಾಗೂ ಬೆಂಗಳೂರಿನ ಸಮೀಪ ಮುಂದಿನ ಪೀಳಿಗೆಯ ಗ್ರೀನ್ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನ ಗೋಡೆ ಹಾರಿ ಮೂವರು ಕೈದಿಗಳು ಎಸ್ಕೇಪ್

‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆ : ತಂತ್ರಜ್ಞಾನ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ನಗರಗಳಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಇದರ ಮೂಲಕ ರಾಜ್ಯದ ಮೂಲೆಮೂಲೆಗಳಲ್ಲಿರುವ ಪ್ರತಿಭಾವಂತ ಯುವಕರಿಗೂ ಜಾಗತಿಕ ಮಟ್ಟದ ಅವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಜನರ ಬದುಕು ಸುಲಭಗೊಳಿಸಲು ಎಐ ಬಳಕೆ: “ಮಾನವೀಯತೆಯನ್ನು ಬದಲಿಸುವುದಲ್ಲ, ಬದಲಿಗೆ ಮಾನವನ ಸಾಮರ್ಥ್ಯವನ್ನು ಬಲಪಡಿಸುವುದೇ ತಂತ್ರಜ್ಞಾನದ ಮುಖ್ಯ ಉದ್ದೇಶ” ಎಂಬ ತತ್ವದಲ್ಲಿ ಸರ್ಕಾರ ನಂಬಿಕೆ ಇಟ್ಟಿದೆ ಎಂದು ಡಿಸಿಎಂ ಹೇಳಿದರು. ರೈತರಿಗೆ ಕನ್ನಡದಲ್ಲೇ ಆಡಿಯೋ ರೂಪದಲ್ಲಿ ಕೃಷಿ ಸಲಹೆ ನೀಡುವುದು, ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ತಂತ್ರಜ್ಞಾನದ ನೆರವು, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಐ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಾದ್ಯಂತ 10 ಸಾವಿರ ಯುವ ಸಂಘ ಸ್ಥಾಪನೆ: ಪ್ರತಿ ಸಂಘಕ್ಕೆ ₹10 ಲಕ್ಷ

‘ಗವರ್ನಮೆಂಟ್-ಫಸ್ಟ್’ ನೀತಿ : ನವೋದ್ಯಮಿಗಳ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರವೇ ಮೊದಲ ಗ್ರಾಹಕನಾಗುವ ‘ಗವರ್ನಮೆಂಟ್-ಫಸ್ಟ್’ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇದರಿಂದ ಸ್ಟಾರ್ಟ್‌ಅಪ್ ಸಂಸ್ಥೆಗಳು ತಮ್ಮ ಹೊಸ ತಂತ್ರಜ್ಞಾನಗಳನ್ನು ನೇರವಾಗಿ ಸರ್ಕಾರದ ಯೋಜನೆಗಳಲ್ಲಿ ಅಳವಡಿಸಿಕೊಳ್ಳುವ ಅವಕಾಶ ದೊರೆಯಲಿದ್ದು, ಕರ್ನಾಟಕವು ದೇಶದ ಅತ್ಯಂತ ಪ್ರಬಲ ತಂತ್ರಜ್ಞಾನ ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಆಯ್ಕೆಗೆ ಗೂಗಲ್‌ಗೆ ಧನ್ಯವಾದ : ‘Google I/O Connect India – 2026’ ಸಮಾವೇಶವನ್ನು ಆಯೋಜಿಸಲು ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಗೂಗಲ್ ಸಂಸ್ಥೆಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸಿದ ಡಿ.ಕೆ. ಶಿವಕುಮಾರ್, “ಬೆಂಗಳೂರು ಕೇವಲ ಒಂದು ನಗರವಲ್ಲ, ಇದು ಜಾಗತಿಕ ನಾವೀನ್ಯತೆ ಮತ್ತು ಅನ್ವೇಷಣೆಗಳ ರಾಜಧಾನಿ” ಎಂದು ಬಣ್ಣಿಸಿದರು.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ CEO ನೇಮಕ: ಅರ್ಜಿ ಆಹ್ವಾನಿಸಿದ ಟ್ರಸ್ಟ್

ಈ ಸಮಾವೇಶದಲ್ಲಿ ನಡೆಯುವ ಚರ್ಚೆಗಳು, ಕಾರ್ಯಾಗಾರಗಳು ಹಾಗೂ ತಾಂತ್ರಿಕ ಸಂವಾದಗಳು ಹೊಸ ಆಲೋಚನೆಗಳಿಗೆ ನಾಂದಿ ಹಾಡಲಿದ್ದು, ಭಾರತದಿಂದ ಜಗತ್ತಿಗೆ ಮಾದರಿಯಾಗುವಂತಹ ಪರಿಹಾರಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.